ADVERTISEMENT

ಸುಸ್ಥಿರ ಅಭಿವೃದ್ಧಿ: ರಾಜ್ಯ ಮುನ್ನಡೆ

ಅನ್ನಪೂರ್ಣ ಸಿಂಗ್
Published 30 ಡಿಸೆಂಬರ್ 2019, 22:36 IST
Last Updated 30 ಡಿಸೆಂಬರ್ 2019, 22:36 IST
   

ನವದೆಹಲಿ: ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧನೆಯಲ್ಲಿ ಎರಡು ಸ್ಥಾನ ಮೇಲೇರಿರುವ ಕರ್ನಾಟಕ, ಈ ಸಾಧನೆಯ ಮುಂಚೂಣಿ ರಾಜ್ಯಗಳ ಪೈಕಿ ಒಂದೆನಿಸಿಕೊಂಡಿದೆ. ವಿಶ್ವಸಂಸ್ಥೆ ನಿಗದಿಪಡಿಸಿರುವ ಸಾಮಾಜಿಕ ಅಭಿವೃದ್ಧಿ ಗುರಿ ಸಾಧನೆಯಲ್ಲಿ 16ರ ಪೈಕಿ 10 ಅಂಕಗಳನ್ನು ಸಂಪಾದಿಸಿದೆ. ಆದರೆ ಬಡತನ ನಿರ್ಮೂಲನೆ, ಹಸಿವು ಮತ್ತು ಲಿಂಗ ಸಮಾನತೆ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿದೆ.

ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ಮಾನದಂಡಗಳಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಗತಿ ಮೌಲ್ಯಮಾಪನ ಮಾಡಲಾಗಿದೆ. ನೀರು, ನೈರ್ಮಲ್ಯ, ಉದ್ದಿಮೆ ಹಾಗೂ ಆವಿಷ್ಕಾರ ಕ್ಷೇತ್ರಗಳಲ್ಲಿನ ಪ್ರಗತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಏರಿಕೆಯಾಗಿದೆ ಎಂದು ನೀತಿ ಆಯೋಗ ಸೋಮವಾರ ಬಿಡುಗಡೆ ಮಾಡಿದ ಎಸ್‌ಡಿಜಿ ವರದಿ ಅಭಿಪ್ರಾಯಪಟ್ಟಿದೆ.

2018ರಲ್ಲಿ ಹಿಮಾಚಲ ಪ್ರದೇಶ, ಕೇರಳ ಹಾಗೂ ತಮಿಳುನಾಡು ಮುಂಚೂಣಿ ರಾಜ್ಯಗಳು ಎನಿಸಿಕೊಂಡಿದ್ದವು. 2019ರಲ್ಲಿ ಈ ಸಾಲಿಗೆ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಸಿಕ್ಕಿಂ ಹಾಗೂ ಗೋವಾ ಸೇರ್ಪಡೆಯಾಗಿವೆ.ಬಿಹಾರ, ಜಾರ್ಖಂಡ್, ಅರುಣಾಚಲ ಪ್ರದೇಶ ರಾಜ್ಯಗಳ ಕಾರ್ಯಕ್ಷಮತೆ ಈ ಬಾರಿ ಕಳಪೆಯಾಗಿದೆ. ಉತ್ತರ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ಗಮನಾರ್ಹ ಸಾಧನೆ ಮಾಡಿವೆ. ಕಳೆದ ಬಾರಿಗೆ ಹೋಲಿಸಿದರೆ ಗುಜರಾತ್‌ ಯಾವುದೇ ಪ್ರಗತಿ ತೋರಿಸಿಲ್ಲ.

ADVERTISEMENT

ಕರ್ನಾಟಕದ ಪ್ರಗತಿಯ ಪಥ
*ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿ ಕರ್ನಾಟಕದ ಗಮನಾರ್ಹ ಸಾಧನೆ. ಕಳೆದ ವರ್ಷ ರಾಜ್ಯದ ಶೇ 50ರಷ್ಟು ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಎನಿಸಿದ್ದರೆ, ಈ ಬಾರಿಶೇ 93.33ರಷ್ಟು ಪ್ರಗತಿ

*ಮನೆಗಳಿಗೆ ವಿದ್ಯುಚ್ಛಕ್ತಿ ಹಾಗೂ ಗ್ರಾಮೀಣ ಭಾಗದ ಮನೆಗಳಲ್ಲಿ ಶೌಚಾಲಯ –ಈ ಎರಡು ಕ್ಷೇತ್ರಗಳಲ್ಲಿ ಕರ್ನಾಟಕದ ಸಾಧನೆ ಶೇ 100

*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರದ ಬಡವರಿಗೆ ಮನೆಗಳ ಹಂಚಿಕೆಯಲ್ಲಿ ಪ್ರಗತಿ. ಕಳೆದ ವರ್ಷದ ಶೇ 5ರಿಂದ ಈ ಬಾರಿ ಶೇ 27ಕ್ಕೆ ಏರಿಕೆ

*ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯದ ಭಾರಿ ಸುಧಾರಣೆ; 100ರ ಪೈಕಿ 72 ಅಂಕ. ಅಗ್ರ ಸ್ಥಾನದಲ್ಲಿ (82) ಕೇರಳ

*ಬಡತನ, ಹಸಿವು ಹಾಗೂ ಲಿಂಗ ಸಮಾನತೆ ಸೂಚ್ಯಂಕದಲ್ಲಿ ರಾಜ್ಯದ ಸಾಧನೆಕಳಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.