ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಚೆನ್ನೈ: ಇಲ್ಲಿಗೆ ಸಮೀಪದ ಇಂಜಕ್ಕಂನಲ್ಲಿರುವ ಥೀಮ್ ಪಾರ್ಕ್‌ನಲ್ಲಿ 36 ಮಂದಿಯ ಗುಂಪಿಗೆ ಮೋಜಿನ ಸವಾರಿ ದುಃಸ್ವಪ್ನವಾಗಿ ಪರಿಣಮಿಸಿದೆ. ತಾಂತ್ರಿಕ ದೋಷದಿಂದಾಗಿ ಸವಾರಿ ವಾಹನವು ಆಕಾಶದಲ್ಲೇ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಪ್ರವಾಸಿಗರು ಭೀತಿಗೊಳಗಾಗಿದ್ದಾರೆ.
ಮಂಗಳವಾರ ರಾತ್ರಿ ಘಟನೆ ನಡೆದಿದೆ.
ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆ ಬಳಿಕ 36 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಗ್ನಿ ಶಾಮಕ ಹಾಗೂ ರಕ್ಷಣಾ ಸೇವಾ ಇಲಾಖೆ ತಿಳಿಸಿದೆ.
ಸ್ಕೈ ಲಿಫ್ಟ್ ಬಳಸಿ 20 ಪುರುಷರು ಹಾಗೂ 16 ಮಹಿಳೆಯರನ್ನು ರಕ್ಷಿಸಿದ್ದೇವೆ. ಅವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಲೋಗನಾಥನ್ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರೊಂದಿಗೆ ಸೇರಿ ಅಗ್ನಿಶಾಮಕ ಹಾಗೂ ರಕ್ಷಣಾ ಇಲಾಖೆಯ ಸುಮಾರು 35 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೇಲೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಪೂರ್ಣವೃತ್ತವಾಗಿ ಸುತ್ತಬೇಕಿದ್ದ ವಾಹನವು ಏಕಾಏಕಿ ಅರ್ಧಕ್ಕೆ ನಿಂತಿದೆ. ಸುದೈವವಶಾತ್ ವಾಹನ ಮೇಲೆ ಇದ್ದಿದ್ದರಿಂದ, ಅದರಲ್ಲಿದ್ದ ಪ್ರವಾಸಿಗರು ಕೆಳಗೆ ಬೀಳುವುದು ತಪ್ಪಿದೆ.
‘ಏಕಾಏಕಿ ನಿಂತಿದ್ದರಿಂದ ನಮಗೆ ಭಯವಾಯಿತು. ಸುಮಾರು ಎರಡು ಗಂಟೆ ನಮ್ಮನ್ನು ರಕ್ಷಣೆ ಮಾಡಲು, ನಮಗೆ ಧೈರ್ಯ ತುಂಬಲು ಯಾರೂ ಇರಲಿಲ್ಲ’ ಎಂದು ಮಹಿಳೆಯೊಬ್ಬರು ಬಳಿಕ ತಿಳಿಸಿದ್ದಾರೆ.
ಪೊಲೀಸ್ ಸಹಾಯಕ್ಕಾಗಿ ನಾವು ಫೋನ್ ಕರೆ ಮತ್ತು ಇನ್‌ಸ್ಟಾಗ್ರಾಮ್ ಮೊರೆ ಹೋದೆವು ಎಂದು ಘಟನೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಹೇಳುವಾಗ ಅವರ ಮೈ ನಡುಗುತ್ತಿತ್ತು.
‘ಟಾಪ್ ಗನ್ ಎನ್ನುವ ಸವಾರಿ ಏಕಾಏಕಿ ಸ್ಥಗಿತಗೊಂಡು 36 ಮಂದಿ ಸಿಲುಕಿದ್ದಾರೆ ಎಂದು ನಮಗೆ ಮಾಹಿತಿ ಬಂದಾಗ ಸಂಜೆ 7.20 ಆಗಿತ್ತು. ಏಣಿ ಬಳಸಿ ಅವರನ್ನು ರಕ್ಷಣೆ ಮಾಡುವ ಕಾರ್ಯ ವಿಫಲವಾದಾಗ, ನಾವು ಸ್ಕೈ ಲಿಫ್ಟ್‌ಗಳನ್ನು ತರಿಸಿ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿದೆವು’ ಎಂದು ಲೋಗನಾಥನ್ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
‘ರಕ್ಷಣೆ ಮಾಡಿದ ಎಲ್ಲರೂ ಸುರಕ್ಷಿತರಾಗಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಪಾರ್ಕ್‌ಗೆ ಆ್ಯಂಬುಲೆನ್ಸ್ ಒಂದನ್ನು ತರಿಸಲಾಗಿತ್ತು. ತಾಂತ್ರಿಕ ದೋಷದಿಂದ ಬೃಹತ್ ಸವಾರಿ ವಾಹನ ಅರ್ಧದಲ್ಲೇ ಸ್ಥಗಿತಗೊಂಡಿರುವುದಾಗಿ ನಮಗೆ ಶಂಕೆ ಇದೆ’ ಎಂದು ಅರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.