ADVERTISEMENT

ನ್ಯಾಯಾಧೀಶರ ಮೇಲೆ ಟೀಕಾ ಪ್ರಹಾರ ಬೇಡ: ಮಾಧ್ಯಮಗಳ ವರದಿಗಳಿಗೆ ‘ಸುಪ್ರೀಂ’ ಅಸಮಾಧಾನ

ಕ್ರೈಸ್ತ ಸಂಸ್ಥೆ, ಪಾದ್ರಿಗಳ ಮೇಲಿನ ದಾಳಿ ಕುರಿತ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 11:50 IST
Last Updated 28 ಜುಲೈ 2022, 11:50 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ‘ನ್ಯಾಯಾಧೀಶರ ಮೇಲೆ ಟೀಕಾ ಪ್ರಹಾರ ಬೇಡ. ನ್ಯಾಯಾಧೀಶರಿಗೂ ಸ್ವಲ್ಪ ಸಮಯ ಕೊಡಿ’ ಎಂದು ಸುಪ್ರೀಂಕೋರ್ಟ್‌ ಗುರುವಾರ ಮಾಧ್ಯಮಗಳಿಗೆ ಹೇಳಿದೆ.

ದೇಶದಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಸಂಬಂಧ ಸಲ್ಲಿಸಿರುವ ಮನವಿ ಅರ್ಜಿ ವಿಚಾರಣೆ ವಿಳಂಬವಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು ‘ನ್ಯಾಯಾಧೀಶರರನ್ನು ಗುರಿಯಾಗಿಸಿ ಟೀಕಿಸಲೂ ಒಂದು ಮಿತಿ ಇರುತ್ತದೆ’ ಎಂದು ಹೇಳಿದೆ.

‘ಕಳೆದ ಬಾರಿ ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ, ಏಕೆಂದರೆ ನಾನು ಕೋವಿಡ್‌ನಿಂದ ಬಳಲುತ್ತಿದ್ದೆ. ಆದರೆ, ಸುಪ್ರೀಂಕೋರ್ಟ್‌ ಈ ಅರ್ಜಿ ವಿಚಾರಣೆಗೆ ವಿಳಂಬ ಮಾಡುತ್ತಿದೆ ಎಂಬುದಾಗಿ ಪತ್ರಿಕೆಗಳಲ್ಲಿ ವರದಿ ಮಾಡಿದ್ದೀರಿ.ಇಂತಹ ಸುದ್ದಿಗಳನ್ನೆಲ್ಲ ನಿಮಗೆ ಯಾರು ಪೂರೈಸುತ್ತಾರೆ?’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹರಿಹಾಯ್ದರು.

ADVERTISEMENT

‘ಅರ್ಜಿ ವಿಚಾರಣೆಗೆನ್ಯಾಯಾಧೀಶರು ವಿಳಂಬ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನುಆನ್‌ಲೈನ್‌ನಲ್ಲಿ ನೋಡಿರುವೆ. ನಮಗೂ ಸಮಯ ಕೊಡಿ. ಒಬ್ಬ ನ್ಯಾಯಾಧೀಶರು ಕೋವಿಡ್‌ನಿಂದ ಬಳಲುತ್ತಿದ್ದ ಕಾರಣಕ್ಕೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಲಿಲ್ಲ. ಈಗ ನಾವು ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುತ್ತೇವೆ, ಇಲ್ಲದಿದ್ದರೆ ಇದು ಕೂಡ ಮತ್ತೊಂದು ರೀತಿ ಸುದ್ದಿಯಾಗುತ್ತದೆ’ ಎಂದು ಪೀಠವು ಹೇಳಿದೆ.

ಅರ್ಜಿದಾರರ ವಕೀಲರು, ವಿಚಾರಣೆ ನಡೆಸುವಂತೆ ಕೋರಿದಾಗ ನ್ಯಾಯಪೀಠ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.ಅರ್ಜಿದಾರರ ಪರ ಹಿರಿಯ ವಕೀಲ ಕೊಲಿನ್ ಗೊನ್ಸಾಲ್ವೆಸ್ ಅವರು ಜೂನ್‌ನಲ್ಲಿ ರಜೆ ಕಾಲದ ಪೀಠದ ಎದುರು, ‘ದೇಶದಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಕ್ರೈಸ್ತ ಪಾದ್ರಿಗಳ ಮೇಲೆ ಪ್ರತಿ ತಿಂಗಳು ಸರಾಸರಿ 45 ರಿಂದ 50 ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ’ ಎಂದು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.