ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಮೋದಿ ವಿರುದ್ಧ ಗೆಹ್ಲೋಟ್ ವಾಗ್ದಾಳಿ

ಪಿಟಿಐ
Published 9 ಫೆಬ್ರುವರಿ 2022, 3:50 IST
Last Updated 9 ಫೆಬ್ರುವರಿ 2022, 3:50 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ಜೈಪುರ: ಸಂಸತ್ತನ್ನು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮೋದಿ ಸರ್ಕಾರ ರಚನೆಯಾದ ತಕ್ಷಣವೇ ಈ ಕುರಿತು ಸೂಚನೆ ನೀಡಿದ್ದ ಬಿಜೆಪಿ ನಾಯಕ ಎಲ್.‌ಕೆ. ಅಡ್ವಾಣಿ ಅವರು ಆರ್‌ಎಸ್‌ಎಸ್ ಒತ್ತಡಕ್ಕೆ ಮಣಿದು ಸುಮ್ಮನಾಗಬೇಕಾಯಿತು ಎಂದು ಹೇಳಿದರು.

ಯಾವ ಸಂದರ್ಭದಲ್ಲಿ ಮತ್ತು ಏಕೆ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು? ಬಳಿಕ ಸರ್ಕಾರವು ಪತನಗೊಂಡಿತು. ಇವೆಲ್ಲವೂ ಎಲ್ಲರಿಗೂ ಗೊತ್ತಿದೆ. ಇದರ ಬಗ್ಗೆ ಈಗ ಮಾತನಾಡುವ ಅರ್ಥವೇನು ? ಎಂದು ಪ್ರಶ್ನಿಸಿದರು.

ದೇಶ ಎತ್ತ ಸಾಗುತ್ತಿದೆ. ಏನೂ ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಗೆಹ್ಲೋಟ್ ಆರೋಪಿಸಿದರು.

ದೇಶದಲ್ಲಿ ಹಿಂಸಾಚಾರ ಹಾಗೂ ಅಪನಂಬಿಕೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‌ಡಿಎ ಸರ್ಕಾರ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಈ ಆರೋಪಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ವ್ಯತಿರಿಕ್ತವಾಗಿ ನಾವು ಜನರನ್ನು ಪ್ರಚೋದಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಕಾರ್ಮಿಕರನ್ನು ಪ್ರಚೋದಿಸುವ ಕೆಲಸ ನಾವು ಮಾಡುತ್ತೇವೆಯೇ? ಎಂದು ಕೇಳಿದರು.

ನೀವು ತಪ್ಪು ಮಾಡಿದ್ದೀರಿ, ಇದರಿಂದಾಗಿ ದಿಢೀರ್ ಲಾಕ್‌ಡೌನ್, ಇದ್ದಕ್ಕಿದ್ದಂತೆಯೇ ನೋಟು ರದ್ಧತಿಯಾಯಿತು. ಬ್ಯಾಂಕ್‌ಗಳ ಮುಂದೆ ಉದ್ದವಾದ ಸಾಲುಗಳು ನಿರ್ಮಾಣವಾದವು. ನೋಟು ರದ್ಧತಿಯ ವೇಳೆ ಜನರು ಹೇಗೆ ಮೃತಪಟ್ಟರು ಎಂಬುದರ ಕುರಿತು ಸರ್ಕಾರ ಸಮೀಕ್ಷೆ ನಡೆಸಿದೆಯೇ ? ವಲಸೆ ಕಾರ್ಮಿಕರು ಬರಿಗಾಲಲ್ಲಿ ನಡೆಯಬೇಕಾಯಿತು. ದಾರಿಯಲ್ಲಿ ಎಷ್ಟು ಮಂದಿ ಮೃತಪಟ್ಟರು ? ಸರ್ಕಾರದ ಬಳಿ ಅಂಕಿಅಂಶ ಇದೆಯೇ ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.