ADVERTISEMENT

ಬಿಜೆಪಿ ಮೈತ್ರಿಯಲ್ಲಿ ಷರತ್ತುಗಳೇ ಇರಲಿಲ್ಲ: ದೇವೇಗೌಡ

‘ಕಾಂಗ್ರೆಸ್‌ ಬೇಷರತ್ತಾಗಿ ಸ್ಥಾನ ಹಂಚಿಕೆಗೆ ಮುಂದಾಗಲಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:00 IST
Last Updated 1 ಜನವರಿ 2019, 20:00 IST
ದೇವೇಗೌಡ
ದೇವೇಗೌಡ   

ನವದೆಹಲಿ: ‘ಬೇಷರತ್‌ ಬೆಂಬಲ ನೀಡುವುದಾಗಿ ರಾಜ್ಯದಲ್ಲಿ ಸರ್ಕಾರ ರಚಿಸಲು ನೆರವಾಗಿರುವ ಕಾಂಗ್ರೆಸ್‌, ಯಾವುದೇ ಷರತ್ತುಗಳನ್ನು ಇರಿಸದೇ ಲೋಕಸಭೆ ಚುನಾವಣೆ ಸ್ಥಾನ ಹೊಂದಾಣಿಕೆಗೆ ಮುಂದಾಗಬೇಕಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ಸಚಿವ ಸ್ಥಾನ ಮತ್ತು ನಿಗಮ, ಮಂಡಳಿಗಳ ನೇಮಕದಲ್ಲಿ ಮೂರನೇ ಒಂದರಷ್ಟು ಸ್ಥಾನ ಬಿಟ್ಟುಕೊಡುವ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್‌, ಲೋಕಸಭೆ ಚುನಾವಣೆಯಲ್ಲೂ ಅಷ್ಟೇ ಪ್ರಮಾಣದ ಸ್ಥಾನಗಳ ಹಂಚಿಕೆಗೆ ಸಿದ್ಧವಾಗಬೇಕಿದೆ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಸಚಿವ ಸ್ಥಾನಗಳ ಹಂಚಿಕೆ ಕುರಿತು ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಬದಲಿಗೆ ಎರಡೂ ಪಕ್ಷಗಳು ಸಮಾನವಾಗಿ ಸಚಿವ ಸ್ಥಾನ ಹಂಚಿಕೊಂಡಿದ್ದವು. ಆದರೆ, ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿರುವ ಕಾಂಗ್ರೆಸ್‌ ಆ ರೀತಿ ನಡೆದುಕೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇದೇ 3ರಂದು ಬೆಂಗಳೂರಿನಲ್ಲಿ ಪಕ್ಷದ ಮುಖಂಡರ ಸಭೆ ಆಯೋಜಿಸಲಾಗಿದೆ. ಗ್ರಾಮ , ಹೋಬಳಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಸ್ಪರ್ಧೆ ಮತ್ತು ನಿಗಮ, ಮಂಡಳಿಗಳ ನೇಮಕ ಕುರಿತು ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಸರ್ಕಾರ ಉರುಳಿಸಬೇಕೆಂಬ ಹೆಬ್ಬಯಕೆ ಹೊಂದಿರುವ ಬಿಜೆಪಿಯ ಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಮೈತ್ರಿ ಸರ್ಕಾರ ಎಲ್ಲವನ್ನೂ ಧೈರ್ಯದಿಂದ ಎದುರಿಸಲಿದೆ ಎಂದ ಅವರು, ‘ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆಮಿಷದ ಸುಳಿವು ದೊರೆತೇ ಅವರು ಆ ರೀತಿ ಹೇಳಿರಬಹುದು’ ಎಂದರು.

ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಿದೆ. ಆದರೆ, ಮುಖ್ಯಮಂತ್ರಿಯವರೇ ಅದಕ್ಕೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದರೆ ಮಾತ್ರ ಆ ನೇಮಕ ಅಧಿಕೃತವಾಗಲಿದೆ ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್‌ ಭರವಸೆ ನೀಡಿದಂತೆ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮೈತ್ರಿ ಸರ್ಕಾರ ರಚನೆಯಾದ ನಂತರ ಇದುವರೆಗೆ 60,000 ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಸಾಲ ಮನ್ನಾ ಕುರಿತು ಲೇವಡಿ ಮಾಡಿದ್ದಾರೆ. ಮಾಹಿತಿ ಇಲ್ಲದೆ ಟೀಕಿಸಿದ್ದಾರೆ ಎಂದು ದೇವೇಗೌಡ ಅಸಮಾಧಾನ ವ್ಯಕ್ರಪಡಿಸಿದರು.

ಹುದ್ದೆ ನಿಭಾಯಿಸುವುದು ಕಷ್ಟ: ವಿಶ್ವನಾಥ್‌

ಬೆಂಗಳೂರು: ಆರೋಗ್ಯ ಸಮಸ್ಯೆಯಿಂದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿಭಾಯಿಸಲು ಆಗುತ್ತಿಲ್ಲ. ಆದರೆ, ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಲ್ಲ’ ಎಂದು ಎಚ್‌.ವಿಶ್ವನಾಥ್‌ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಜವಾಬ್ದಾರಿಯನ್ನು ಹಿಂ‍ಪಡೆಯಬೇಕು ಎಂದು ಪಕ್ಷದ ವರಿಷ್ಠರನ್ನು ಕೋರಲು ನಿರ್ಧರಿಸಿದ್ದೇನೆ. ಜನವರಿ 3ರಂದು ಪಕ್ಷದ ಪ್ರಮುಖರ ಸಭೆ ಇದೆ. ಆ ದಿನ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಜತೆಗೆ ಚರ್ಚೆ ನಡೆಸುತ್ತೇನೆ’ ಎಂದರು.

‘ದೇವೇಗೌಡರು ಹಿರಿಯರಾಗಿದ್ದು, ಹೆಚ್ಚು ಅನುಭವ ಹೊಂದಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ನನಗೊಂದು ಅವಕಾಶ ನೀಡಿದ್ದಾರೆ. ಅವರ ಸೂಚನೆಯಂತೆ ನಡೆಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.