ಸಾವು (ಪ್ರಾತಿನಿಧಿಕ ಚಿತ್ರ)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಓಸಿ) ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿರುವ ದಾಳಿಯಿಂದಾಗಿ ಪೂಂಚ್ ವಲಯದಲ್ಲಿ 16 ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಗುರುವಾರ ತಿಳಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ನಾಗರಿಕರ ಶವಪೆಟ್ಟಿಗೆಗಳ ಮೇಲೆ ಅವರ ರಾಷ್ಟ್ರಧ್ವಜವನ್ನು ಹೊದಿಸಿ ಸರ್ಕಾರಿ ಗೌರವದೊಂದಿದೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಮ್ಮು–ಕಾಶ್ಮೀರದ ಎಲ್‌ಓಸಿಯ ಹಲವು ವಲಯಗಳಲ್ಲಿ ಪಾಕಿಸ್ತಾನದ ಸೇನೆಯು ಭಾರಿ ಪ್ರಮಾಣದ ಶೆಲ್ ದಾಳಿ ನಡೆಸಿತ್ತು. ಗುರುದ್ವಾರವನ್ನೂ ಗುರಿಯಾಗಿಸಿ ಸಿಖ್ ಸಮುದಾಯದ ಮೇಲೂ ದಾಳಿ ನಡೆಸಿದ್ದು, ಇದರಲ್ಲಿ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ. ಭಾರತೀಯ ಸೇನೆಯು ಅದಕ್ಕೆ ತಕ್ಕ ಉತ್ತರ ನೀಡಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಲಾಖೆಯ ಪ್ರಚಾರ ವಿಭಾಗ ತಿಳಿಸಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳ ಮೇಲೆ ಬುಧವಾರ ರಾತ್ರಿ ನಡೆದ ‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನದಿಂದ ಶೆಲ್ ದಾಳಿ ತೀವ್ರಗೊಂಡಿದೆ. ಮೇ 7 ಮತ್ತು 8ರ ರಾತ್ರಿ ಕುಪ್ವಾಡ, ಬಾರಾಮುಲ್ಲಾ, ಉರಿ ಮತ್ತು ಅಖ್ನೂರ್ ಮೇಲೆ ಪಾಕಿಸ್ತಾನ ಸೇನೆಯು ಫಿರಂಗಿ ಸೇರಿ ಹಲವು ಲಘು ಶಸ್ತ್ರ ಬಳಸಿ ಅಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಭಾಗದ ಐದು ಗಡಿ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸಿದ್ದು, ಸದ್ಯಕ್ಕೆ ಬಾಗಿಲು ತೆರೆಯದಂತೆ ಅಧಿಕಾರಿಗಳಿಗೆ ಆಡಳಿತವು ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.