ADVERTISEMENT

ಗುಡಿಸಲುಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುವವರು ಬಡತನದ ಬಗ್ಗೆ ಮಾತನಾಡುತ್ತಾರೆ:ಮೋದಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 13:31 IST
Last Updated 4 ಫೆಬ್ರುವರಿ 2025, 13:31 IST
<div class="paragraphs"><p>ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)</p></div>

ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

   

ನವದೆಹಲಿ: ಬಡವರ ಗುಡಿಸಲುಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವವರು ಸಂಸತ್ತಿನಲ್ಲಿ ಬಡವರ ಬಗ್ಗೆ ಮಾತನಾಡುವುದು ಬೇಸರ ತರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಐದು ದಶಕಗಳವರೆಗೆ ಗರೀಬಿ ಹಠಾವೊ ಘೋಷಣೆಗಳು ಕೇಳಿಬರುತ್ತಿದ್ದವು. ಆದರೆ ಈಗ ಸುಮಾರು 25 ಕೋಟಿ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಬಡವರಿಗೆ ಈವರೆಗೂ 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಛಾವಣಿಯಿಲ್ಲದ ಮನೆಯಲ್ಲಿ ಜೀವಿಸುವವರ ಬದುಕು ಹೇಗಿರುತ್ತದೆ ಎಂದು ಇಂಥವರಿಗೆ (ವಿರೋಧ ಪಕ್ಷ) ಹೇಗೆ ಅರ್ಥವಾಗುತ್ತದೆ ಎಂದು ಕುಟುಕಿದ್ದಾರೆ.

ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನಿಜವಾದ ಅಭಿವೃದ್ಧಿಯನ್ನು ಜನರಿಗೆ ನೀಡುತ್ತೇವೆ. ವಿಕಸಿತ ಭಾರತದ ಸಂಕಲ್ಪವನ್ನು ಬಲಪಡಿಸುವತ್ತ ಗಮನಹರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.

ಬಡವರ ನೋವು, ಜನಸಾಮಾನ್ಯರು ಎದುರಿಸುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದವರು ಬಡವರ ಬಗ್ಗೆ ಮಾತನಾಡುತ್ತಾರೆ. ಬಡವರ ಸಮಸ್ಯೆಗಳನ್ನು ಅರಿತುಕೊಳ್ಳುವ ಉತ್ಸಾಹ ಬೇಕು. ಆದರೆ, ಕೆಲವರಿಗೆ ಅದು ಇರುವುದಿಲ್ಲ ಎಂದು ರಾಹುಲ್‌ ಗಾಂಧಿ ವಿರುದ್ಧ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.

ಜನವರಿ 31ರಂದು ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್ತಿನ ಸಂಕೀರ್ಣದಲ್ಲಿಯೇ ರಾಷ್ಟ್ರಪತಿಯವರ (ದ್ರೌಪದಿ ಮುರ್ಮು) ಭಾಷಣ ನೀರಸವಾಗಿದೆ ಎಂದು ಚರ್ಚಿಸುತ್ತಿದ್ದರು ಎಂದು ಮೋದಿ ತಮ್ಮ ಭಾಷಣದ ವೇಳೆ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.