ADVERTISEMENT

‘ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಹಿಡಿದರೆ ಯಾರೊಬ್ಬರಿಗೂ ಉಳಿಗಾಲವಿಲ್ಲ’

ಪಿಟಿಐ
Published 19 ಫೆಬ್ರುವರಿ 2019, 19:05 IST
Last Updated 19 ಫೆಬ್ರುವರಿ 2019, 19:05 IST
ಕೆ.ಜೆ.ಎಸ್. ದಿಲ್ಲೋನ್‌
ಕೆ.ಜೆ.ಎಸ್. ದಿಲ್ಲೋನ್‌   

ಶ್ರೀನಗರ: ‘ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಹಿಡಿದರೆ ಯಾರೊಬ್ಬರಿಗೂ ಉಳಿಗಾಲವಿಲ್ಲ. ಎಲ್ಲರನ್ನೂ ಮಟ್ಟ ಹಾಕುತ್ತೇವೆ’ ಎಂದು ಭಾರತೀಯ ಸೇನೆ ಮಂಗಳವಾರ ಕಟುವಾದ ಶಬ್ದಗಳಲ್ಲಿ ಎಚ್ಚರಿಕೆ ನೀಡಿದೆ.

ಉಗ್ರಗಾಮಿ ಸಂಘಟನೆಗಳಿಗೆ ಸೇರದಂತೆ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಚಿನಾರ್ ಕೋರ್‌ನ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ದಿಲ್ಲೋನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪೋಷಕರಿಗೆ ಸಲಹೆ ಮಾಡಿದ್ದಾರೆ.

‘ಕಾಶ್ಮೀರದ ಎಲ್ಲ ಪೋಷಕರಲ್ಲಿ, ಅದರಲ್ಲೂ ತಾಯಂದಿರನ್ನು ಕೇಳಿಕೊಳ್ಳುತ್ತಿದ್ದೇನೆ. ಭಯೋತ್ಪಾದಕಸಂಘಟನೆಗಳನ್ನು ಸೇರಿರುವ ನಿಮ್ಮ ಮಕ್ಕಳನ್ನು ವಾಪಸ್‌ ಕರೆಸಿಕೊಳ್ಳಿ. ಶರಣಾಗಲು ಹೇಳಿ’ ಎಂದು ದಿಲ್ಲೋನ್‌ ಹೇಳಿದ್ದಾರೆ.

ADVERTISEMENT

‘ಪುಲ್ವಾಮಾ ದಾಳಿಯ ಸಂಚುಕೋರನನ್ನು ನಾಲ್ಕು ದಿನಗಳಲ್ಲಿ ಪತ್ತೆ ಮಾಡಿ, ಹೊಡೆದುರುಳಿಸಿದ್ದೇವೆ. ಬಂದೂಕು ಕೈಗೆತ್ತಿಕೊಂಡಿರುವ ನಿಮ್ಮ ಮಕ್ಕಳು ಶರಣಾಗದಿದ್ದರೆ ಅವರನ್ನೂ ಹೊಡೆದುರುಳಿಸುತ್ತೇವೆ’ ಎಂದುಅವರು ಎಚ್ಚರಿಕೆ ನೀಡಿದ್ದಾರೆ.

ಪಾಕ್‌, ಐಎಸ್‌ಐ ಕೈವಾಡ: ‘ಪುಲ್ವಾಮಾ ದಾಳಿಯನ್ನು ಜೈಷ್ ಎ ಮೊಹಮ್ಮದ್ (ಜೆಇಎಂ) ನಡೆಸಿದೆ. ಪಾಕಿಸ್ತಾನ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐಈ ದಾಳಿಗೆ ನೆರವು ನೀಡಿದೆ. ಪಾಕಿಸ್ತಾನದ ಮೇಲ್ವಿಚಾರಣೆಯಲ್ಲೇ ಈ ದಾಳಿ ನಡೆದಿದೆ. ಕಾಶ್ಮೀರ ಕಣಿವೆಯಲ್ಲಿರುವ ಜೆಇಎಂ ಮುಖಂಡರೆಲ್ಲರೂ ಪಾಕಿಸ್ತಾನದವರೇ ಆಗಿದ್ದಾರೆ’ ಎಂದು ದಿಲ್ಲೋನ್‌ ಮಾಹಿತಿ ನೀಡಿದ್ದಾರೆ.

‘ಕಾಶ್ಮೀರವನ್ನು ಪ್ರವೇಶಿಸುವ ಯಾರೊಬ್ಬರೂ ಜೀವಂತವಾಗಿಹಿಂತಿರುಗುವುದಿಲ್ಲ’ ಎಂದೂಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನೆಂಥ ಪುರಾವೆ ಬೇಕು: ಭಾರತ ಪ್ರಶ್ನೆ
ನವದೆಹಲಿ
: ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಸಾಕ್ಷ್ಯಾಧಾರ ಕೇಳಿರುವ ಇಮ್ರಾನ್ ಖಾನ್ ಅವರನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

ದಾಳಿಯ ಹೊಣೆ ಹೊತ್ತ ಜೈಷ್‌ –ಎ–ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್ ಪಾಕಿಸ್ತಾನದಲ್ಲೇ ಇರುವುದು ಸ್ಪಷ್ಟ. ಇಷ್ಟು ಸಾಕ್ಷ್ಯ ಸಾಕಲ್ಲವೇ ಎಂದು ಪ್ರಶ್ನಿಸಿದೆ. ದಾಳಿಯ ಹೊಣೆ ಹೊರಲು ನಿರಾಕರಿಸಿರುವ ಪಾಕಿಸ್ತಾನದ ನಡೆಯಿಂದ ಅಚ್ಚರಿಯೇನೂ ಆಗಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಸಾಕ್ಷ್ಯಾಧಾರ ನೀಡಿದರೆ ಕ್ರಮ: ಇಮ್ರಾನ್‌
ಇಸ್ಲಾಮಾಬಾದ್
: ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಗಳನ್ನು ಭಾರತ ಒದಗಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭರವಸೆ ನೀಡಿದ್ದಾರೆ.

ಒಂದು ವೇಳೆ ಭಾರತ ದಂಡೆತ್ತಿ ಬಂದರೆ ಪ್ರತಿದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ಅವರು ಮಂಗಳವಾರ ನೀಡಿದ್ದಾರೆ. ಭಯೋತ್ಪಾದನೆ ನಿಗ್ರಹ ಮಾತುಕತೆಗೆ ಭಾರತ ಮುಂದಾದರೆ ಅದಕ್ಕೂ ಪಾಕಿಸ್ತಾನ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ದೇಶದ ಪ್ರಜೆಗಳನ್ನು ವಿಡಿಯೊದಲ್ಲಿ ಉದ್ದೇಶಿಸಿ ಮಾತನಾಡಿದ ಇಮ್ರಾನ್‌,ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬ ಭಾರತದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

‘ಭಾರತದಲ್ಲಿ ಲೋಕಸಭಾ ಚುನಾವಣೆ ಸಮೀಪಿಸಿದೆ. ಮತಗಳನ್ನು ಪಡೆಯಲು ಸಹಜವಾಗಿ ನೆರೆಯ ಪಾಕಿಸ್ತಾನದ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ ಸತ್ಯಾಸತ್ಯತೆಯನ್ನು ಭಾರತ ಅರ್ಥಮಾಡಿಕೊಂಡು ಮಾತುಕತೆಗೆ ಮುಂದಾಗುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ಇಮ್ರಾನ್ ಭರವಸೆ ವ್ಯಕ್ತಪಡಿಸಿದ್ದಾರೆ.

‘ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಪಾಕಿಸ್ತಾನವೇ ಕಾರಣ ಎಂದು ಭಾರತ ಪ್ರತಿಪಾದಿಸುತ್ತಿದೆ. ಪ್ರತಿ ಬಾರಿ ಬಲಿಪಶು ಮಾಡುತ್ತಾ ಬಂದಿದೆ’ ಎಂದು ಅವರು ದೂರಿದ್ದಾರೆ.

ಎಂತಹದೇ ಹೋರಾಟಕ್ಕೆ ಸೇನೆ ಸಜ್ಜು
ಬೆಂಗಳೂರು: ‘
ಉಗ್ರರ ದಾಳಿಯಿಂದ ನಮ್ಮ ಸೈನಿಕರ ನೈತಿಕ ಬಲ ಕುಗ್ಗಿಲ್ಲ. ಯಾವುದೇ ರೀತಿಯ ಹೋರಾಟ ನಡೆಸಲು, ಪ್ರತೀಕಾರ ತೀರಿಸಲು ನಮ್ಮ ಸೇನೆ ಸಜ್ಜಾಗಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಸಿದಿದೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ದಾಳಿ ಬಳಿಕ ದೇಶದ ಜನರು ನೀಡಿರುವ ಬೆಂಬಲವನ್ನು ನೋಡಿ ಸೈನಿಕರು ಉತ್ಸುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರವಾದವನ್ನು ಮತ್ತಷ್ಟು ಮಟ್ಟಹಾಕುವ ಪ‍್ರತಿಜ್ಞೆಯೊಂದಿಗೆ ಹೋರಾಡಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.