ADVERTISEMENT

ಇಂಗ್ಲಿಷ್ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವ ಕಾಲ ದೂರವಿಲ್ಲ: ಅಮಿತ್ ಶಾ

ಶಮಿನ್‌ ಜಾಯ್‌
Published 20 ಜೂನ್ 2025, 2:28 IST
Last Updated 20 ಜೂನ್ 2025, 2:28 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

– ಪಿಟಿಐ ಚಿತ್ರ

ನವದೆಹಲಿ: ದೇಶದ ಭಾಷೆಗಳ ಪರಂಪರೆಯನ್ನು ಎತ್ತಿಹಿಡಿಯುವ ಅಗತ್ಯವಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆಂಗ್ಲ ಭಾಷೆಯನ್ನು ಮಾತನಾಡುವ ಜನರು ನಾಚಿಕೆಪಟ್ಟುಕೊಳ್ಳುವಂತಹ ಸಮಯ ದೂರವಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಐಎಎಸ್‌ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಅವರ 'ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂ' ಬಿಡುಗಡೆ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಶಾ, ವಿದೇಶಿ ಭಾಷೆಗಳೊಂದಿಗೆ ಭಾರತವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಯಾವುದೇ ವ್ಯಕ್ತಿಯ ಇತಿಹಾಸ, ಸಂಸ್ಕೃತಿ ಹಾಗೂ ಧರ್ಮವನ್ನು ಅನ್ಯ ಭಾಷೆಗಳಿಂದ ಅರ್ಥಮಾಡಿಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಾನು ಹೇಳುವುದನ್ನು ಗಮನವಿಟ್ಟು ಕೇಳಿ ಹಾಗೇ ನೆನಪಿಟ್ಟುಕೊಳ್ಳಿ. ಈ ದೇಶದಲ್ಲಿ ಇಂಗ್ಲಿಷ್‌ ಮಾತನಾಡುತ್ತಿರುವ ಜನರು ನಾಚಿಕೆಪಟ್ಟುಕೊಳ್ಳುವಂತಾಗುವ ಸಮಾಜ ಸೃಷ್ಟಿಯಾಗುವ ಸಮಯ ದೂರವಿಲ್ಲ. ಈ ದೇಶದ ಭಾಷೆಗಳು ನಮ್ಮ ಸಂಸ್ಕೃತಿಯ ಅಮೂಲ್ಯ ರತ್ನಗಳು. ಅವುಗಳಿಲ್ಲದೆ ಭಾರತೀಯರಿಲ್ಲ. ಭಾರತವನ್ನು ವಿದೇಶಿ ಭಾಷೆಯೊಂದಿಗೆ ಊಹಿಸಿಕೊಳ್ಳಲಾಗದು' ಎಂದು ಪ್ರತಿಪಾದಿಸಿದ್ದಾರೆ.

ಭಾರತೀಯ ಭಾಷೆಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸುವುದಕ್ಕೆ ಹಲವು ತೊಡಕುಗಳಿವೆ ಎಂಬುದು ಗೊತ್ತಿದೆ. ಆದರೆ, ಭಾರತೀಯ ಸಮುದಾಯವು ಎಲ್ಲ ಅಡೆತಡೆಗಳನ್ನು ಮೀರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

'ನಮ್ಮ ಭಾಷೆಗಳ ಮೇಲೆ ಹೆಮ್ಮೆ ಪಡುವ ಮೂಲಕ, ದೇಶವನ್ನು ಮುನ್ನಡೆಸಲಿದ್ದೇವೆ. ಸಂಶೋಧನೆಗಳನ್ನು ಕೈಗೊಳ್ಳಲಿದ್ದೇವೆ. ನಿರ್ಧಾರಗಳನ್ನು ಮಾಡಲಿದ್ದೇವೆ ಹಾಗೆಯೇ ಆದರ್ಶಪ್ರಾಯರಾಗಿ ಜಗತ್ತನ್ನೇ ಮುನ್ನಡೆಸುತ್ತೇವೆ. ಇದರ ಬಗ್ಗೆ ಯಾರಿಗೂ ಅನುಮಾನವೇ ಬೇಡ. 2047ರ ಹೊತ್ತಿಗೆ ನಾವು ವಿಶ್ವದಲ್ಲೇ ಅಗ್ರಸ್ಥಾನಕ್ಕೇರಲು ನಮ್ಮ ಭಾಷೆಗಳು ಸಾಕಷ್ಟು ಕೊಡುಗೆ ನೀಡಲಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ದೇಶವು ಕತ್ತಲಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಸಾಹಿತ್ಯವು ನಮ್ಮ ಧರ್ಮ, ಸ್ವಾತಂತ್ರ್ಯ ಹಾಗೂ ಸಂಸ್ಕೃತಿಯ ದೀಪಗಳನ್ನು ಬೆಳಗಿಸಿದೆ' ಎಂದಿರುವ ಶಾ, 'ಸರ್ಕಾರದಲ್ಲಿ ಬದಲಾವಣೆಗಳಾದರೆ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ, ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಮುಟ್ಟಲು ಯಾರಾದರೂ ಪ್ರಯತ್ನಿಸಿದರೆ, ಇಡೀ ಸಮಾಜ ಎದುರು ನಿಂತು ಅವರನ್ನು ಹಿಮ್ಮೆಟ್ಟಿಸಿದೆ. ಸಾಹಿತ್ಯವು ನಮ್ಮ ಸಮಾಜದ ಆತ್ಮ' ಎಂದು ಹೇಳಿದ್ದಾರೆ.

'ಆಡಳಿತ ವ್ಯವಸ್ಥೆಯ ಮೇಲೆ ಬ್ರಿಟಿಷ್‌ ಮಾದರಿಯ ಪ್ರಭಾವವಿದೆ' ಎಂದಿರುವ ಶಾ, 'ಅಧಿಕಾರಿಗಳು ಸಹಾನುಭೂತಿ ರೂಢಿಸಿಕೊಳ್ಳುವ ಅಗತ್ಯವಿದೆ. ಅವರಿಗೆ ನೀಡುವ ತರಬೇತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬೇಕಿದೆ. ಸಹಾನುಭೂತಿ ಇಲ್ಲದಿದ್ದರೆ, ಆಡಳಿತದ ನಿಜವಾದ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ' ಎಂದು ಒತ್ತಿಹೇಳಿದ್ದಾರೆ.

'ಸಾಮೂಹಿಕವಾಗಿ ಬದಲಾವಣೆ ಆರಂಭವಾದರೆ, ಅದು ಕ್ರಾಂತಿಯಾಗಿ ಬದಲಾಗುತ್ತದೆ. ಅಂತಹ ಬದಲಾವಣೆಯನ್ನು ನಾವು ಇಂದು ನೋಡಬಹುದಾಗಿದೆ. ಈ ಪಯಣವು 2047ರ ಹೊತ್ತಿಗೆ ನಮ್ಮ ವೈಭವವನ್ನು ಮರಳಿ ತರಲಿದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.