ADVERTISEMENT

ರಾಜ್ಯದ ಮೂರು ಕಡೆ ‘ಡ್ರೋನ್’ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2018, 18:45 IST
Last Updated 28 ಆಗಸ್ಟ್ 2018, 18:45 IST
   

ನವದೆಹಲಿ: ಮಾನವ ರಹಿತ ವೈಮಾನಿಕ ವ್ಯವಸ್ಥೆ ‘ಡ್ರೋನ್‌’ ಪರೀಕ್ಷಾರ್ಥ ಹಾರಾಟಕ್ಕೆ ಕೇಂದ್ರ ಸರ್ಕಾರವು ಕರ್ನಾಟಕದ ಮೂರು ಸ್ಥಳಗಳನ್ನು ಆಯ್ಕೆ ಮಾಡಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದೇಶದ ಹಲವೆಡೆ ಈ ಉದ್ದೇಶಕ್ಕಾಗಿ ಒಟ್ಟು 23 ಆಯಕಟ್ಟಿನ ಪ್ರದೇಶಗಳನ್ನು ಗುರುತಿಸಿದೆ.

ಚಿತ್ರದುರ್ಗದ ವೈಮಾನಿಕ ಪರೀಕ್ಷಾರ್ಥ ಹಾರಾಟ ವಲಯ, ಗಣಿಮಂಗಲ ಗ್ರಾಮ ಮತ್ತು ಕೊಡಗಿನ ಚೌಡಿಗುಡಿ ಎಸ್ಟೇಟ್‌ ಡ್ರೋನ್‌ ಪರೀಕ್ಷಾರ್ಥ ಹಾರಾಟಕ್ಕೆ ಸೂಕ್ತ ಎಂದು ಡಿಜಿಸಿಎ ಸೋಮವಾರ ಬಿಡುಗಡೆ ಮಾಡಿದ ಡ್ರೋನ್‌ ನಿಯಂತ್ರಣ ನಿಯಮಾವಳಿಯಲ್ಲಿ ಹೇಳಿದೆ.

ADVERTISEMENT

ದೇಶದ ಒಟ್ಟು 23 ಪ್ರದೇಶಗಳ ಪೈಕಿ 10 ಸ್ಥಳಗಳು ದಕ್ಷಿಣ ಭಾರತದಲ್ಲಿಯೇ ಇವೆ. ತಮಿಳುನಾಡಿನ ವೆಲ್ಲೂರು, ಸೇಲಂ, ಈರೋಡ್‌ ಮತ್ತು ಕೊಯಮತ್ತೂರು, ಕೇರಳದ ಮುನ್ನಾರ್‌ ಮತ್ತು ಇಡುಕ್ಕಿ, ಹೈದರಾಬಾದ್‌ ಬಳಿಯ ಮುಲುಗು ಗ್ರಾಮ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಡ್ರೋನ್‌ ತಯಾರಿಕೆ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಉದ್ಯಮಗಳಿಗೆ ಈ ಪ್ರದೇಶಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಡ್ರೋನ್‌ ಹಾರಾಟ ನಿಷೇಧ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಆರು ಪ್ರಮುಖ ವಿಮಾನ ನಿಲ್ದಾಣಗಳ ಸುತ್ತಮುತ್ತ ಡ್ರೋನ್‌ ಹಾರಾಟವನ್ನು ನಿಷೇಧಿಸಲಾಗಿದೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಚಾಲಕರಹಿತ ಪುಟ್ಟ ವಿಮಾನ ಸುಳಿಯುವಂತಿಲ್ಲ.

ಇನ್ನುಳಿದ ವಿಮಾನ ನಿಲ್ದಾಣಗಳ ಸುತ್ತಮುತ್ತ ಡ್ರೋನ್‌ ಹಾರಾಟಕ್ಕೆ ನಿಯಮವನ್ನು ಕೊಂಚ ಸಡಿಸಲಾಗಿದೆ. ಈ ನಿಲ್ದಾಣಗಳ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಡ್ರೋನ್‌ ಹಾರಾಟ ನಿರ್ಬಂಧಿಸಲಾಗಿದೆ.

ಡ್ರೋನ್‌ ಹಾರಾಟ ನಿಯಂತ್ರಣಕ್ಕೆ ಸೋಮವಾರ ಡಿಜಿಸಿಎ ಪ್ರಕಟಿಸಿದ ಹೊಸ ನೀತಿಯಲ್ಲಿ ಆಹಾರ ಮತ್ತು ಇತರ ಸಾಮಗ್ರಿಗಳ ಸಾಗಾಟಕ್ಕೂ ತಡೆಯೊಡ್ಡಲಾಗಿದೆ. ವಿದೇಶಿಯರು ಭಾರತದಲ್ಲಿ ವಾಣಿಜ್ಯ ಉದ್ದೇಶಕ್ಕೆ ಡ್ರೋನ್‌ ಹಾರಾಟ ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಡ್ರೋನ್‌ ಹಾರಾಟ: ಎಲ್ಲಿ, ಏನು ನಿಷೇಧ?

* ದೆಹಲಿಯ ರಾಷ್ಟ್ರಪತಿ ಭವನ, ಸಂಸತ್‌ ಭವನ, ನಾರ್ಥ್‌ ಮತ್ತು ಸೌತ್‌ ಬ್ಲಾಕ್‌ಗಳಿರುವ ವಿಜಯ್‌ ಚೌಕ್‌ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿ

* ಕೇಂದ್ರ ಗೃಹ ಸಚಿವಾಲಯ ಗುರುತಿಸಿದ ನಿಷೇಧಿತ ವಲಯಗಳ ಎರಡು ಕಿ.ಮೀ ಸುತ್ತಮುತ್ತ

* ಎಲ್ಲ ರಾಜ್ಯಗಳ ಸಚಿವಾಲಯ, ಪರಿಸರ ಸೂಕ್ಷ್ಮ ವಲಯ, ರಾಷ್ಟ್ರೀಯ ಸಂರಕ್ಷಿತ ಅರಣ್ಯ, ವ್ಯನ್ಯಜೀವಿ ಧಾಮಗಳ ಬಳಿ ಮೂರು ಕಿ.ಮೀ ವ್ಯಾಪ್ತಿ

* ಚಲಿಸುತ್ತಿರುವ ವಾಹನ, ಹಡಗು, ವಿಮಾನದಿಂದ ಡ್ರೋನ್‌ ಹಾರಿಸುವಂತಿಲ್ಲ

* ವಿಮಾನದಲ್ಲಿ ಹ್ಯಾಂಡ್ ಬ್ಯಾಗೇಜ್‌ ಜತೆ ಡ್ರೋನ್‌ ಕೊಂಡೊಯ್ಯಲು ಅವಕಾಶ ಇಲ್ಲ

* ಚಾಲಕರಹಿತ ಪುಟ್ಟ ವಿಮಾನದಲ್ಲಿ ಆಹಾರ ಸಾಮಗ್ರಿ ಮತ್ತು ಇನ್ನಿತರ ವಸ್ತುಗಳ ಸಾಗಾಟ ನಿರ್ಬಂಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.