ನವದೆಹಲಿ: ಮದ್ರಾಸ್ಹೈಕೋರ್ಟ್ ಆದೇಶದ ಮೇರೆಗೆಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ಅನ್ನು ಗೂಗಲ್ ಬ್ಲಾಕ್ ಮಾಡಿದೆ.
ಆ್ಯಪ್ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಚೀನಾದ ಬೈಟ್‌ಡಾನ್ಸ್ ಟೆಕ್ನಾಲಜಿ ಮಾಡಿರುವ ಮನವಿಯನ್ನು ಮಂಗಳವಾರ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ.
ಮದ್ರಾಸ್ ಹೈಕೋರ್ಟ್ ಆದೇಶದ ಬಳಿಕ ಗೂಗಲ್‌ನ ಮತ್ತು ಆ್ಯಪಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಟಿಕ್ ಟಾಕ್ ನಿಷೇಧಿಸುವಂತೆ ಸೂಚಿಸಿತ್ತು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ. ಆ್ಯಪ್‌ನ ಬಗ್ಗೆ ಪ್ರತಿಕ್ರಿಯೆ ನೀಡಲು ಗೂಗಲ್ ನಿರಾಕರಿಸಿದೆ. ಆದರೆ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವುದಾಗಿ ತಿಳಿಸಿದೆ. ಆ್ಯಪಲ್ ಮತ್ತುಬೈಟ್‌ಡಾನ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ್ಯಪ್ ವಿಶ್ಲೇಷಣಾ ಸಂಸ್ಥೆ ‘ಸೆನ್ಸರ್ ಟವರ್’ ಪ್ರಕಾರ ಫೆಬ್ರುವರಿ ವೇಳೆಗೆ ಭಾರತದಲ್ಲಿ ಸುಮಾರು24 ಕೋಟಿಗೂ ಹೆಚ್ಚು ಬಾರಿ ಟಿಕ್ ಟಾಕ್ ಡೌನ್‌ಲೋಡ್ ಮಾಡಲಾಗಿದೆ.
2019 ಜನವರಿ ವೇಳೆಗೆ 30 ಕೋಟಿಗೂ ಹೆಚ್ಚು ಜನ ಆ್ಯಪ್ ಇನ್‌ಸ್ಟಾಲ್ ಮಾಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 12 ಪಟ್ಟು ಹೆಚ್ಚು ಎನ್ನಲಾಗಿದೆ.
ಟಿಕ್ ಟಾಕ್ ನಿಷೇಧಿಸುವಂತೆ ಏಪ್ರಿಲ್ 3ರಂದು ಮದ್ರಾಸ್ ಹೈಕೋರ್ಟ್ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿತ್ತು.ಅಶ್ಲೀಲ ಮತ್ತು ಅಸಭ್ಯ ವಿಡಿಯೋಗಳು ಈ ಆ್ಯಪ್‌ನಲ್ಲಿವೆ. ಇದರಲ್ಲಿರುವ ವಿಡಿಯೋಗಳು ವ್ಯಕ್ತಿಯ ಖಾಸಗಿತನವನ್ನು ಹರಣ ಮಾಡುತ್ತಿವೆ ಎಂದು ಆದೇಶ ನೀಡುವ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಜತೆಗೆ ಟಿಕ್ ಟಾಕ್‌ನಿಂದ ಮಾಡಲಾದ ವಿಡಿಯೋಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೂ ಸೂಚನೆ ನೀಡಿತ್ತು. ಮದುರೈ ಮೂಲದ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತುಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಆದೇಶ ನೀಡಿತ್ತು.
ಚೀನಾದ ಬೀಜಿಂಗ್ ಬೈಟ್‌ಡಾನ್ಸ್ ಕಂಪನಿ ಒಡೆತನದ ಟಿಕ್ ಟಾಕ್ ಜಗತ್ತಿನಾದ್ಯಂತ ಐವತ್ತು ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಅಲ್ಲದೆ, ಜಗತ್ತಿನಲ್ಲಿ ಹೆಚ್ಚು ಡೌನ್‌ಲೋಡ್‌ಗೊಂಡ ಆ್ಯಪ್‌ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.