
ನವದೆಹಲಿ: ರಿಲಯನ್ಸ್ ಗ್ರೂಪ್‌ನ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗೈರಾಗಿದ್ದಾರೆ. ಇ.ಡಿ ವಿಚಾರಣೆಗೆ ಅವರು ಗೈರಾಗುತ್ತಿರುವುದು ಇದು 2ನೇ ಬಾರಿಯಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಫೆಬ್ರುವರಿ 10ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೂ ಅವರು ಇ.ಡಿ ಮುಂದೆ ಹಾಜರಾಗಿರಲಿಲ್ಲ. ಅದರ ನಂತರ ಅವರಿಗೆ ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿತ್ತು.
ವಿಚಾರಣೆಗೆ ಹಾಜರಾಗದಿರಲು ಅವರು ನೀಡಿದ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಇ.ಡಿ ಅವರಿಗೆ ಹೊಸ ದಿನಾಂಕವನ್ನು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೀನಾ ಅವರು ಹೇಳಿಕೆ ನೀಡಿದ ನಂತರ, ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮ್ಯಾನ್‌ಹಟನ್‌ನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿ ವಿಷಯದಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿ ಟೀನಾ ಅಂಬಾನಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ರಿಲಯನ್ಸ್ ಗ್ರೂಪ್‌ನ ಹಲವು ಕಂಪನಿಗಳು ಮತ್ತು ಅವುಗಳ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಅನಿಲ್ ಅಂಬಾನಿ ಅವರನ್ನು ಬುಧವಾರ 2ನೇ ಬಾರಿಗೆ ಇ.ಡಿ. ಮುಂದೆ ಹಾಜರಾಗುವಂತೆ ಹೇಳಲಾಗಿತ್ತು. ಅದಕ್ಕೂ ಮೊದಲು ಅವರು 2025ರ ಆಗಸ್ಟ್‌ನಲ್ಲಿ ಅವರನ್ನು ಇ.ಡಿ ವಿಚಾರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.