ADVERTISEMENT

ತಿರುಮಲದ ಲಡ್ಡು ಪ್ರಸಾದ ಪ್ರಕರಣ; ಹಾಲು ಬಳಸದೆಯೇ ತುಪ್ಪ ತಯಾರಿಕೆ: ಎಸ್‌ಐಟಿ

ತಿರುಮಲದ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 14:18 IST
Last Updated 10 ನವೆಂಬರ್ 2025, 14:18 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ಹೈದರಾಬಾದ್‌: ತಿರುಮಲದ ಪವಿತ್ರ ಲಡ್ಡು ಪ್ರಸಾದ ತಯಾರಿಸಲು ಬಳಸಲಾಗಿದ್ದ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಎಸ್‌ಐಟಿ), 2019–2024ರ ನಡುವೆ ಪೂರೈಕೆದಾರರು ಹಾಲು ಬಳಸದೆಯೇ ತುಪ್ಪ ತಯಾರಿಸಿರುವ ಸಂಗತಿಯನ್ನು ಪತ್ತೆ ಮಾಡಿದೆ.

ಮೂಲಗಳ ಪ್ರಕಾರ, ಫೆಬ್ರುವರಿಯಲ್ಲಿ ಸಿಬಿಐ ಬಂಧಿಸಿದ್ದ ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಮಿಲ್ಕ್‌ ಪ್ರೈವೆಟ್‌ ಲಿಮಿಟೆಡ್‌ನ ನಿರ್ದೇಶಕರಾದ ಪೋಮಿಲ್‌ ಜೈನ್‌ ಮತ್ತು ವಿಪಿನ್‌ ಜೈನ್‌ ಅವರು ಉತ್ತರಾಖಂಡದ ರೂರ್ಕಿ ಬಳಿಯ ಭಗವಾನ್‌ಪುರದಲ್ಲಿರುವ ತಮ್ಮ ಘಟಕದಲ್ಲಿ ಕಲಬೆರಕೆ ತುಪ್ಪ ತಯಾರಿಸಿದ್ದರು ಎನ್ನುವುದು ತಿಳಿದುಬಂದಿದೆ. 

ಆರೋಪಿಗಳು ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್‌ ಬಡ್ಜ್‌ ಕಂಪನಿಯಿಂದ ಪಡೆದ ಪಾಮ್‌ ಆಯಿಲ್‌, ಪಾಮ್‌ ಕರ್ನಲ್‌ ಎಣ್ಣೆ ಮತ್ತು ಪಾಮೊಲಿನ್‌ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ. ಈ ವಸ್ತುಗಳನ್ನು ಅಲ್ಪ ಪ್ರಮಾಣದ ಶುದ್ಧ ತುಪ್ಪದೊಂದಿಗೆ ಸೇರಿಸಿ ಬೀಟಾ–ಕೆರೋಟಿನ್‌, ಅಸಿಟಿಕ್‌ ಆ್ಯಸಿಡ್‌ ಎಸ್ಟರ್‌ ಮತ್ತು ಸಿಂಥೆಟಿಕ್‌ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. 

ADVERTISEMENT

ಆರೋಪಿಗಳ ಪೈಕಿ ಒಬ್ಬರ ಬಂಧನ ಸಂಬಂಧ ಎಸ್‌ಐಟಿಯು ಆಂಧ್ರ ಪ್ರದೇಶದ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್‌ ವರದಿಯಲ್ಲಿ ಈ ವಿವರಗಳು ಬಹಿರಂಗಗೊಂಡಿವೆ.

ಪೋಮಿಲ್‌ ಮತ್ತು ವಿಪಿನ್‌ ಜೈನ್‌ ಅವರು ಈ ಕಲಬೆರಕೆ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಮಿಲ್ಕ್‌ ಪ್ರೈವೆಟ್‌ ಲಿಮಿಟೆಡ್‌ ಮತ್ತು ಶ್ರೀಕಾಳಹಸ್ತಿ ಬಳಿಯ ಶ್ರೀ ವೈಷ್ಣವಿ ಡೇರಿ ಸ್ಪೆಷಾಲಿಟೀಸ್‌ ಪ್ರೈವೆಟ್‌ ಲಿಮಿಟೆಡ್‌, ಪುಣೆ ಬಳಿಯ ಮಾಲಗಂಗಾ ಮಿಲ್ಕ್‌ ಆ್ಯಂಡ್‌ ಆಗ್ರೋ ಪ್ರಾಡಕ್ಟ್ಸ್‌ ಪ್ರೈವೆಟ್‌ ಲಿಮಿಟೆಡ್‌ ಮತ್ತು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಎಆರ್‌ ಡೇರಿ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸೇರಿದಂತೆ ಇತರ ಕಂಪನಿಗಳ ಮೂಲಕ ಪೂರೈಸಿದ್ದರು.

ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸುವ ಪ್ರಸಾದವನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗಿತ್ತು. 2019-2024ರ ನಡುವೆ ಈ ಸಂಸ್ಥೆಗಳು ಸುಮಾರು ₹240 ಕೋಟಿ ಮೌಲ್ಯದ ಸುಮಾರು 60.37 ಲಕ್ಷ ಕೆ.ಜಿ ತುಪ್ಪವನ್ನು ಪೂರೈಸಿವೆ.

ತಮಿಳುನಾಡು ಮೂಲದ ಎಆರ್‌ ಡೇರಿ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯು ಜೈನ್‌ ಅವರ ಡೇರಿಯಿಂದ ತುಪ್ಪವನ್ನು ಖರೀದಿಸಿ ಟಿಟಿಡಿಗೆ ಪ್ರತಿ ಕೆ.ಜಿ.ಗೆ ₹2.75ರಿಂದ ₹3ರ ಕಮಿಷನ್‌ ಪಡೆದು ಪೂರೈಸಿತ್ತು ಎಂದು ಎಸ್‌ಐಟಿ ಸಲ್ಲಿಸಿದ್ದ ಹಿಂದಿನ ರಿಮ್ಯಾಂಡ್‌ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ತುಪ್ಪ ಕಲಬೆರಕೆ ವರದಿಗಳ ಬಗ್ಗೆ ಟಿಟಿಡಿ ಯಾವುದೇ ಕ್ರಮ ಕೈಗೊಂಡಿಲ್ಲ.‌

ಕಲಬೆರಕೆ ತುಪ್ಪ: ಪರೀಕ್ಷಾ ವರದಿಯಲ್ಲಿ ದೃಢ

ಸಸ್ಯಜನ್ಯ ಎಣ್ಣೆಯೊಂದಿಗೆ ಕಲಬೆರಕೆ ಮಾಡಿ ತುಪ್ಪ ತಯಾರಿಸಿರುವುದನ್ನು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) 2022ರ ಆಗಸ್ಟ್‌ನಲ್ಲಿ ನಡೆಸಿದ್ದ ಪರೀಕ್ಷಾ ವರದಿಗಳು ದೃಢಪಡಿಸಿವೆ ಎಂದು ಸಿಬಿಐ ನೇತೃತ್ವದ ಎಸ್‌ಐಟಿ ಹೇಳಿದೆ. ಆಗಿನ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರಿಗೆ ತಿಳಿಸಿದ್ದರೂ ಪೂರೈಕೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದೇ ಕಂಪನಿಗಳು 2024ರವರೆಗೆ ಟಿಟಿಡಿಗೆ ತುಪ್ಪ ಪೂರೈಸುವುದನ್ನು ಮುಂದುವರಿಸಿದ್ದವು. ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಮಿಲ್ಕ್‌ ಪ್ರೈವೆಟ್‌ ಲಿಮಿಟೆಡ್‌ 2022ರ ಅಕ್ಟೋಬರ್‌ವರೆಗೆ ಪೂರೈಸಿತ್ತು ಎಂದು ಸಿಬಿಐ ತನ್ನ ರಿಮ್ಯಾಂಡ್‌ ವರದಿಯಲ್ಲಿ ಉಲ್ಲೇಖಿಸಿದೆ. ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಕಡೂರು ಚಿನ್ನಪ್ಪಣ್ಣ ಅವರು 2019 ಮತ್ತು 2023ರ ನಡುವೆ ತುಪ್ಪ ಪೂರೈಕೆದಾರರಿಂದ ಹಣ ಪಡೆದಿದ್ದಾರೆ ಎಂದು ಹೇಳಿದೆ. ಆಗಿನ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ಸುಬ್ಬಾರೆಡ್ಡಿ 2019ರಿಂದ 2023ರವರೆಗೆ ಟಿಟಿಡಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.