
ತಿರುಮಲ ತಿರುಪತಿ ದೇವಸ್ಥಾನ ಮತ್ತು ತಿರುಪತಿ ಲಡ್ಡು
ಪಿಟಿಐ
ನವದೆಹಲಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ನಡೆಯುತ್ತಿರುವ ‘ತಪ್ಪು ಮಾಹಿತಿ ಅಭಿಯಾನಕ್ಕೆ’ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆಹೋಗಲು ಯೋಜಿಸಿರುವುದಾಗಿ ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಮಾಜಿ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ (ವೈಎಸ್‌ಆರ್‌ಸಿಪಿ) ವೈ.ವಿ.ಸುಬ್ಬಾರೆಡ್ಡಿ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಚನೆಯಾಗಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇನ್ನೂ ತನಿಖೆ ನಡೆಸುತ್ತಿದೆ. ಆದರೆ ಕೆಲ ಆಯ್ದ ವಿಷಯಗಳನ್ನು ಮತ್ತು ಊಹಾಪೋಹದ ಅಂಕಿಅಂಶಗಳನ್ನು ಆಧರಿಸಿ ಟಿಟಿಡಿ ಖ್ಯಾತಿಗೆ ಹಾನಿ ಮಾಡಲಾಗುತ್ತಿದೆ. ಈ ಮೂಲಕ ಭಕ್ತರ ಭಾವನೆಗಳಿಗೂ ಧಕ್ಕೆ ತರಲಾಗುತ್ತಿದೆ’ ಎಂದು ಅವರು ಹೇಳಿದರು.
‘ಈ ವಿಷಯದಲ್ಲಿ ನಾನು ಮುಗ್ಧನಿದ್ದೇನೆ. ಈ ಸಂಬಂಧ ಸತ್ಯಶೋಧನಾ ಪರೀಕ್ಷೆ ಮತ್ತು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ’ ಎಂದು ಅವರು ತಿಳಿಸಿದರು.
ತಿರುಮಲದಲ್ಲಿನ ವೆಂಕಟೇಶ್ವರ ಪವಿತ್ರ ಕ್ಷೇತ್ರವನ್ನು ರಾಜಕೀಯ ಹಗ್ಗಜಗ್ಗಾಟಕ್ಕೆ ಎಳೆದು ತರುತ್ತಿರುವುದು ಬೇಸರ ಮೂಡಿಸಿದೆ ಎಂದು ಅವರು ಹೇಳಿದರು.
‘ಟಿಟಿಡಿ ಆಡಳಿತ, ಸರ್ಕಾರ, ಮಾಧ್ಯಮ ಸಂಸ್ಥೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಒತ್ತಾಯಿಸುತ್ತೇನೆ. ಪರಾಮರ್ಶೆ ಮಾಡದೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ. ಪ್ರಮಾಣೀಕೃತ ಪ್ರಯೋಗಾಲಯದ ಫಲಿತಾಂಶಗಳನ್ನಷ್ಟೇ ಬಿಡುಗಡೆ ಮಾಡಿ’ ಎಂದು ತಿಳಿಸಿದರು.
‘2019–2024ರ ಅವಧಿಯಷ್ಟೇ ಅಲ್ಲದೆ, ಕಳೆದ 15 ವರ್ಷಗಳಲ್ಲಿನ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸುವಂತೆ ನಾನು ಎಸ್‌ಐಟಿಯನ್ನು ಕೋರಿದ್ದೇನೆ’ ಎಂದರು.
‘2014–19ರಲ್ಲಿ ನಾಯ್ಡು ಅವರ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಟಿಟಿಡಿಗೆ ಸೇರಿದ ₹1,200 ಕೋಟಿಯನ್ನು ಖಾಸಗಿ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿತ್ತು’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.