ಹೈದರಾಬಾದ್: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಜನವರಿ 8ರಂದು ನಡೆದ ಕಾಲ್ತುಳಿತಕ್ಕೆ ಉಪ ಪೊಲೀಸ್ ವರಿಷ್ಠಾಧಿಕಾರಿ ವಿ.ರಮಣಕುಮಾರ್ ಮತ್ತು ಎಸ್‌ವಿ ಡೈರಿ ಫಾರ್ಮ್ ನಿರ್ದೇಶಕ ಡಾ.ಹೇಮಂತ್ ರೆಡ್ಡಿ ಅವರ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ನ್ಯಾಯಾಂಗ ಸಮಿತಿಯು ವರದಿ ನೀಡಿದೆ.
ವೈಕುಂಠ ಏಕಾದಶಿ ದರ್ಶನದ ಟೋಕನ್ ಪಡೆದುಕೊಳ್ಳುವಾಗ ಉಂಟಾದ ಕಾಲ್ತುಳಿತದಲ್ಲಿ ಆರು ಭಕ್ತರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.
ಆಂಧ್ರ ಪ್ರದೇಶ ಸರ್ಕಾರವು ದುರಂತದ ಸಮಗ್ರ ತನಿಖೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಸತ್ಯನಾರಾಯಣ ಮೂರ್ತಿ ಅವರ ನೇತೃತ್ವದ ನ್ಯಾಯಾಂಗ ಆಯೋಗವನ್ನು ನೇಮಕ ಮಾಡಿತ್ತು. ಆಯೋಗವು 54 ಪ್ರತ್ಯಕ್ಷ ಸಾಕ್ಷಿಗಳು, ಸಂತ್ರಸ್ತರ ಕುಟುಂಬಸ್ಥರು, ಗಾಯಾಳುಗಳು ಮತ್ತು ಅವರ ಸಂಬಂಧಿಕರು ಮತ್ತು ಪೊಲೀಸರು, ಸಿಬ್ಬಂದಿಯಿಂದ ಹೇಳಿಕೆ ಪಡೆದಿತ್ತು.
ಆಯೋಗವು ಗುರುವಾರ ರಾಜ್ಯ ಸಂಪುಟಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಪದ್ಮಾವತಿ ಪಾರ್ಕ್ ಸಮೀಪದ ಟೋಕನ್ ವಿತರಣೆ ಕೇಂದ್ರದ ಬಳಿ ಮಧ್ಯಾಹ್ನ 2 ಗಂಟೆಗೆ ಹಾಜರಿರುವಂತೆ ಡಿಎಸ್‌ಪಿ ವಿ.ರಮಣಕುಮಾರ್ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರು ಆ ಸಮಯದಲ್ಲಿ ನಿಯೋಜನೆಗೊಂಡ ಸ್ಥಳದಲ್ಲಿ ಇರಲಿಲ್ಲ. ಡಾ. ಹೇಮಂತ್ ರೆಡ್ಡಿ ಅವರು ಟೋಕನ್ ವಿತರಣೆ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದರು. ಇವರು ಜನದಟ್ಟಣೆ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಮತ್ತು ಅದು ತಮ್ಮ ಹೊಣೆಗಾರಿಕೆ ಅಲ್ಲ ಎಂದು ಅವರು ಭಾವಿಸಿದ್ದರು ಎಂದು ಆಯೋಗವು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.