
ಬಂಧನ
ತಿರುಪ್ಪೂರ್: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯಂತೆ ದೇಶದಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು ಬಾಂಗ್ಲಾದೇಶದ ಆರು ಪ್ರಜೆಗಳನ್ನು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
‘ದೆಹಲಿ ಪೊಲೀಸರ ತಂಡ ಫೆಬ್ರುವರಿ 21ರಂದು ಆರು ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಶಂಕಿತರು ಒಂದು ರಾತ್ರಿ ನಮ್ಮ ಕಸ್ಟಡಿಯಲ್ಲಿದ್ದರು. ಭಾನುವಾರ ಬೆಳಿಗ್ಗೆ ದೆಹಲಿ ಪೊಲೀಸರು ಎಲ್ಲ ಆರು ಮಂದಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ’ ಎಂದು ತಿರುಪ್ಪೂರ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಆರು ಮಂದಿ ಬಾಂಗ್ಲಾದೇಶದವರು ಎಂಬುದು ತಿಳಿದುಬಂದಿದೆ. ದೆಹಲಿ ಪೊಲೀಸರು ಖಚಿತ ಮಾಹಿತಿಯ ಆಧಾರದಲ್ಲಿ ಇಲ್ಲಿಗೆ ಬಂದು ಅವರನ್ನು ಬಂಧಿಸಿರಬಹುದು’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
‘ವಲಸೆ ಕಾರ್ಮಿಕರ ಮೇಲೆ ನಾವು ನಿಗಾ ಇಡಬೇಕು. ತಿರುಪ್ಪೂರ್‌ನ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಬರುವ ವಲಸೆ ಕಾರ್ಮಿಕರು ಸರ್ಕಾರದ ಕಾರ್ಮಿಕ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ತಿರುಪ್ಪೂರು ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿದ್ದು, 2.2 ಲಕ್ಷ ಜನರು ಈ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.