ADVERTISEMENT

ಪಶ್ಚಿಮ ಬಂಗಾಳ: ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಕೋವಿಡ್‌ನಿಂದ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 8:19 IST
Last Updated 25 ಏಪ್ರಿಲ್ 2021, 8:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಕೋವಿಡ್-19 ಸೋಂಕು ತಗುಲಿದ್ದ ಖಾರ್ದಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಭಾನುವಾರ ಬೆಳಿಗ್ಗೆ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿನ್ಹಾ (59) ಅವರಿಗೆ ಎರಡು ದಿನಗಳ ಹಿಂದಷ್ಟೇ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಅವರನ್ನು ಬೆಲಿಯಾಘಾಟಾ ಐಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನ್ಹಾ ಅವರ ಸಾವಿಗೆ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

'ತುಂಬಾ ದುಃಖ ಮತ್ತು ಆಘಾತಕ್ಕೊಳಗಾಗಿದ್ದೇನೆ. ಖಾರ್ದಾಹಾದ ನಮ್ಮ ಅಭ್ಯರ್ಥಿ ಕಾಜಲ್ ಸಿನ್ಹಾ ಕೋವಿಡ್‌ ಸೋಂಕಿಗೆ ಸಾವಿಗೀಡಾಗಿದ್ದಾರೆ. ಅವರು ತಮ್ಮ ಜೀವನವನ್ನು ಜನರ ಸೇವೆ ಸಲ್ಲಿಸಲು ಅರ್ಪಿಸಿದರು ಮತ್ತು ದಣಿವರಿಯದ ಪ್ರಚಾರವನ್ನು ನಡೆಸಿದರು. ಅವರು ತೃಣಮೂಲ ಕಾಂಗ್ರೆಸ್‌ಗೆ ದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರಾಗಿದ್ದರು. ನಾವು ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ' ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಏಪ್ರಿಲ್ 22ರಂದು ಖಾರ್ದಾ ಕ್ಷೇತ್ರದಲ್ಲಿ ಮತದಾನ ನಡೆಯಿತು. ಈ ತಿಂಗಳ ಆರಂಭದಲ್ಲಿ ಜಂಗೀಪುರ ಸ್ಥಾನದಿಂದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಅಭ್ಯರ್ಥಿ ಪ್ರದೀಪ್ ಕುಮಾರ್ ನಂದಿ ಮತ್ತು ಸಂಸರ್‌ಗಂಜ್ ಕ್ಷೇತ್ರದ ಕಾಂಗ್ರೆಸ್ ನಾಮನಿರ್ದೇಶಿತ ರೆಜೌಲ್ ಹಾಕ್ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.