ADVERTISEMENT

ಪಶ್ಚಿಮ ಬಂಗಾಳ: ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗಕ್ಕೆ ಟಿಎಂಸಿ ಮನವಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 11:49 IST
Last Updated 19 ಮಾರ್ಚ್ 2021, 11:49 IST
ಚುನಾವಣಾ ಆಯೋಗವನ್ನು ಭೇಟಿಯಾದ ಟಿಎಂಸಿ ನಿಯೋಗ (ಪಿಟಿಐ)
ಚುನಾವಣಾ ಆಯೋಗವನ್ನು ಭೇಟಿಯಾದ ಟಿಎಂಸಿ ನಿಯೋಗ (ಪಿಟಿಐ)   

ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ವಿಚಾರವಾಗಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಿಯೋಗ ಶುಕ್ರವಾರ ಚುನಾವಣಾ ಆಯೋಗವನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಪಕ್ಷದ ನಿಯೋಗದಲ್ಲಿ ಸುಗತ ರಾಯ್, ಮಹುವಾ ಮೋಯಿತ್ರ ಹಾಗೂ ಯಶವಂತ್ ಸಿನ್ಹಾ ಸಹ ಇದ್ದರು.

ಇಂದು ನಾವು ಚುನಾವಣಾ ಆಯೋಗವನ್ನು ಭೇಟಿಯಾಗಿ ಮೂರು ವಿಷಯಗಳ ಬಗ್ಗೆ ಚರ್ಚೆ ನಡೆಸಿದೆವು. ಮತಗಟ್ಟೆಯ 100 ಮೀಟರ್ ಆವರಣದಲ್ಲಿ ಮಾತ್ರ ಕೇಂದ್ರೀಯ ಪಡೆಗಳನ್ನು ಭದ್ರತೆಗೆ ನಿಯೋಜಿಸುವ ಬಗ್ಗೆ, ಶೇ 5ಕ್ಕೆ ಬದಲಾಗಿ ನೂರರಷ್ಟು ವಿವಿಪ್ಯಾಟ್ ಪರಿಶೀಲನೆ ನಡೆಸುವುದು ಹಾಗೂ ಮುಖ್ಯಮಂತ್ರಿಗಳ ಮೇಲೆ ಮಾರ್ಚ್ 10ರಂದು ನಡೆದ ಹಲ್ಲೆ ಯತ್ನ ವಿಚಾರಗಳನ್ನು ಆಯೋಗದ ಜತೆ ಚರ್ಚಿಸಿದೆವು ಎಂದು ಮಹುವಾ ತಿಳಿಸಿದ್ದಾರೆ.

ADVERTISEMENT

ನಿರಂತರ ಕೊಂಕು ನುಡಿಗಳಿಂದ ಸಂಸ್ಥೆಯನ್ನು ಅಲಕ್ಷಿಸಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗವು ಇತ್ತೀಚೆಗೆ ತೀಕ್ಷ್ಣ ಸಂದೇಶ ರವಾನಿಸಿತ್ತು. ಇದರ ಬೆನ್ನಲ್ಲೇ ಪಕ್ಷದ ನಿಯೋಗವು ಆಯೋಗವನ್ನು ಭೇಟಿಮಾಡಿ ಮಾತುಕತೆ ನಡೆಸಿದೆ.

ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಮಮತಾ ಇತ್ತೀಚಿನ ದಿನಗಳಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಆರೋಪಿಸುತ್ತಲೇ ಬಂದಿದ್ದಾರೆ.

ಇತ್ತೀಚೆಗೆ, ಚುನಾವಣಾ ಆಯೋಗದ ಉಪ ಆಯುಕ್ತ ಸುದೀಪ್ ಜೈನ್ ತಟಸ್ಥ ನಿಲುವನ್ನು ಪ್ರಶ್ನಿಸಿದ್ದ ಟಿಎಂಸಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೇವೆಯಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿತ್ತು. ಆದರೆ ಚುನಾವಣಾ ಆಯೋಗವು ಸುದೀಪ್ ಜೈನ್ ಬೆಂಬಲಕ್ಕೆ ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.