ಅಮಿತ್ ಶಾ
–ಪಿಟಿಐ ಚಿತ್ರ
ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಯಾನ್ ಅವರು ಹಕ್ಕು ಚ್ಯುತಿ ನೋಟಿಸ್ ನೀಡಿದ್ದಾರೆ.
ಬುಧವಾರ ಮಧ್ಯಾಹ್ನದ ಬಳಿಕ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ. ಅಮಿತ್ ಶಾ ಹೇಳಿಕೆ ಹಾಗೂ ಅವರು ಹೇಳಿದ ರೀತಿ ಎರಡೂ ಅವಮಾನಕಾರಿಯಾಗಿತ್ತು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಅಮಿತ್ ಶಾ ಹೇಳಿಕೆ ವಿರೋಧಿಸಿ ಸಂಸತ್ ಭವನದ ಬಳಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಗೆ ಟಿಎಂಸಿ ಗೈರಾಗಿತ್ತು. ರಾಜ್ಯಸಭೆಯಲ್ಲಿ ಮಧ್ಯಾಹ್ನ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿತ್ತು. ಕಾಂಗ್ರೆಸ್ ಪ್ರತಿಭಟನೆಗೆ ಬೆಂಬಲಿಸುವುದಿಲ್ಲವೇ ಎನ್ನುವ ಪ್ರಶ್ನೆಗೆ ‘ನಾವು ಅಂಬೇಡ್ಕರ್ ಜೊತೆಗೆ ಇದ್ದೇವೆ’ ಎಂದು ಒಬ್ರಯಾನ್ ಪ್ರತಿಕ್ರಿಯಿಸಿದ್ದರು.
ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, ‘ಅಂಬೇಡ್ಕರ್, ಅಂಬೇಡ್ಕರ್... ಎಂದು ಹೇಳುವುದು ಇದೀಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ, ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಹೇಳಿದ್ದರು.
ಅಮಿತ್ ಶಾ ಅವರ ಹೇಳಿಕೆಯು ಬಿಜೆಪಿಯ ಜಾತಿವಾದಿ ಹಾಗೂ ದಲಿತ ವಿರೋಧಿ ಮಾನಸಿಕತೆಯ ಪ್ರತೀಕ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಮಿತ್ ಶಾ ಅವರ ಹೇಳಿಕೆಯು ಆಕ್ಷೇಪಾರ್ಹ. ಅಂಬೇಡ್ಕರ್ ಅವರನ್ನು ಮಾರ್ಗದರ್ಶಕ ಹಾಗೂ ಸ್ಪೂರ್ತಿಯನ್ನಾಗಿಸಿಕೊಂಡ ಲಕ್ಷಾಂತರ ಜನರಿಗೆ ಮಾಡಿದ ಅವಮಾನ ಇದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.