ಟಿಎಂಸಿ
ನವದೆಹಲಿ: ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು 30 ದಿನಕ್ಕಿಂತ ಹೆಚ್ಚು ದಿನಗಳು ಬಂಧನಕ್ಕೊಳಗಾದರೆ ಪದಚ್ಯುತಗೊಳಿಸುವ ಮಸೂದೆಯ ಪರಿಶೀಲನೆಗೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತೃಣಮೂಲ ಕಾಂಗ್ರೆಸ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರೊಂದಿಗೆ ಬುಧವಾರ ಸಭೆ ನಡೆಸಿದ ಟಿಎಂಸಿ ನಾಯಕರು, ಜೆಪಿಸಿ ಕಲಾಪಗಳಿಂದ ಎಲ್ಲಾ ವಿರೋಧ ಪಕ್ಷಗಳೂ ದೂರ ಉಳಿಯಬೇಕು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಈ ಮಸೂದೆಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಲಾಗುವುದರಿಂದ, 31 ಸದಸ್ಯರ ಜೆಪಿಸಿಗೆ ತನ್ನ ಪಕ್ಷದ ಪ್ರತಿನಿಧಿಗಳನ್ನು ಕಳುಹಿಸದೇ ಇರಲು ಟಿಎಂಸಿ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ ಮಸೂದೆ ಅಂಗೀಕಾರಕ್ಕೆ ಬೇಕಾದಷ್ಟು ಸದಸ್ಯ ಬಲವೂ ಇಲ್ಲದೇ ಇರುವುದರಿಂದ ಇದು ಸಮಯ ಪೋಲು ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಮಸೂದೆ ಅಂಗೀಕಾರಗೊಂಡರು, ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು. ಆದರೆ ಎನ್‌ಡಿಎ ಸರ್ಕಾರಕ್ಕೆ ಅಷ್ಟು ಬಹುಮತ ಇಲ್ಲ.
ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನಾರಚನೆ (ತಿದ್ದುಪಡಿ) ಮಸೂದೆ 2025 ಅನ್ನು ಲೋಕಸಭೆಯಲ್ಲಿ ಮಂಡಿಸಿ, ಜಂಟಿ ಸದನ ಸಮಿತಿಗೆ ಒಪ್ಪಿಸಲಾಯಿತು.
ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಸೂದೆಗಳನ್ನು ಮಂಡಿಸುವಾಗ, ತೃಣಮೂಲ ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಧಾವಿಸಿ ಮಸೂದೆ ಪ್ರತಿಯನ್ನ್ನು ಹರಿದು ಸಚಿವರ ಮೇಲೆ ಎಸೆದರು. ರಾಜ್ಯಸಭೆಯಲ್ಲಿಯೂ ಸಹ, ಮಸೂದೆಗಳನ್ನು ಜೆಪಿಸಿಗೆ ಕಳುಹಿಸುವ ಪ್ರಸ್ತಾವನೆಯನ್ನು ಗುರುವಾರ ಅಮಿತ್ ಶಾ ಮಂಡಿಸಿದಾಗ, ತೃಣಮೂಲ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.