ADVERTISEMENT

ಭಾರತ್ ಜೋಡೊ ಯಾತ್ರೆ ಬಗ್ಗೆ ಶ್ಲಾಘನೆ; ನಾಯಕರ ಹೇಳಿಕೆ ವೈಯಕ್ತಿಕ ಎಂದ ಟಿಎಂಸಿ

ಪಿಟಿಐ
Published 10 ಜನವರಿ 2023, 2:26 IST
Last Updated 10 ಜನವರಿ 2023, 2:26 IST
ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ
ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ    

ಕೋಲ್ಕತ್ತ: ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆಯನ್ನು ಬೆಂಬಲಿಸಿರುವ ತಮ್ಮ ಪಕ್ಷದ ನಾಯಕರುಗಳ ಹೇಳಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದಿರಲು ತೃಣಮೂಲ ಕಾಂಗ್ರೆಸ್‌ ಪಕ್ಷ (ಟಿಎಂಸಿ) ನಿರ್ಧರಿಸಿದೆ.

ರಾಹುಲ್‌ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುತ್ತಿರುವ ಯಾತ್ರೆಯ ಬಗ್ಗೆ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಮತ್ತು ಶಾಸಕ ಚಿರಂಜಿತ್‌ ಚಕ್ರವರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಟಿಎಂಸಿಯ ಹಿರಿಯ ನಾಯಕರು ಹೇಳಿದ್ದಾರೆ.

'ರಾಹುಲ್‌ ಗಾಂಧಿಯವರು ಸದ್ಯ ವಿರೋಧ ಪಕ್ಷಗಳ ಪಾಳಯದಲ್ಲಿ ಪ್ರಧಾನಿ ಹುದ್ದೆಯ ಮುಂಚೂಣಿಯಲ್ಲಿದ್ದಾರೆ. ಭಾರತ್‌ ಜೋಡೊ ಯಾತ್ರೆಯು ಇತ್ತೀಚಿನ ದಿನಗಳಲ್ಲಿ ದೇಶ ಕಂಡ ಐತಿಹಾಸಿಕ ಯಾತ್ರೆಯಾಗಿದೆ. ಇದನ್ನು ಎಲ್‌.ಕೆ.ಅಡ್ವಾಣಿ ಅವರು 90ರ ದಶಕದಲ್ಲಿ ನಡೆಸಿದ್ದ ರಾಮ ರಥ ಯಾತ್ರೆಗೆ ಹೋಲಿಸಬಹುದಾಗಿದೆ' ಎಂದು ಸಿನ್ಹಾ ಹೇಳಿದ್ದರು.

ADVERTISEMENT

ಟಿಎಂಸಿಯಿಂದ ಮೂರು ಬಾರಿಯ ಶಾಸಕರಾಗಿ ಆಯ್ಕೆಯಾಗಿರುವ ಚಿರಂಜಿತ್ ಚಕ್ರವರ್ತಿ, 'ಭಾರತ್‌ ಜೋಡೊ ಯಾತ್ರೆಯು ಒಂದು ಉದಾತ್ತ ಕಾರ್ಯಕ್ರಮವಾಗಿದೆ. ಅದನ್ನು ಎಲ್ಲರೂ ಬೆಂಬಲಿಸಬೇಕು' ಎಂದು ಕರೆ ನೀಡಿದ್ದರು.

ಆದಾಗ್ಯೂ, ಪಕ್ಷದ ನಾಯಕತ್ವವು ಈ ಇಬ್ಬರ ಹೇಳಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ನಿರಾಕರಿಸಿದೆ.

'ಕಾಂಗ್ರೆಸ್‌ ಮೊದಲು ತನ್ನ ಮನೆಯನ್ನು ಒಗ್ಗೂಡಿಸಿಕೊಳ್ಳಬೇಕು. ಕಾಂಗ್ರೆಸ್ಸಿಗರು ಮೊದಲು ಪಕ್ಷವನ್ನು ಒಂದು ಮಾಡಲಿ. ನಂತರ ಭಾರತವನ್ನು ಜೋಡಿಸಲಿ. ಶತ್ರುಜ್ಞ ಸಿನ್ಹಾ ಅಥವಾ ಚಿರಂಜಿತ್ ಚಕ್ರವರ್ತಿ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಪಕ್ಷದ ಅಭಿಪ್ರಾಯವಲ್ಲ' ಎಂದು ಟಿಎಂಸಿ ಸಂಸದ ಸಂತನು ಸೇನ್‌ ಹೇಳಿದ್ದಾರೆ.

ಸೇನ್‌ ಹೇಳಿಕೆಯನ್ನು ಬೆಂಬಲಿಸಿರುವ ಟಿಎಂಸಿ ವಕ್ತಾರ ಕುನಾಲ್‌ ಘೋಷ್‌, 'ಯಾತ್ರೆಯ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕೀಯ ಕಾರ್ಯಕ್ರಮ ನಡೆಸುತ್ತಿದೆ. ಅದರ ಬಗ್ಗೆ ನಾವು ಹೇಳುವುದೇನೂ ಇಲ್ಲ. ಇದು ಬಿಜೆಪಿ ವಿರೋಧಿ ಕಾರ್ಯಕ್ರಮ. ಅದಕ್ಕೆ ಅವರು ಪ್ರತಿಕ್ರಿಯಿಸಬೇಕು. ಯಾತ್ರೆಯಲ್ಲಿ ಸಾಕಷ್ಟು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.