ADVERTISEMENT

ತ್ರಿಪುರ: ಟಿಎಂಸಿಯಿಂದ ಪ್ರಣಾಳಿಕೆ ಬಿಡುಗಡೆ

ಪಿಟಿಐ
Published 5 ಫೆಬ್ರುವರಿ 2023, 19:30 IST
Last Updated 5 ಫೆಬ್ರುವರಿ 2023, 19:30 IST
   

ಅಗರ್ತಲಾ: ವಿಧಾನಸಭೆ ಚುನಾವಣೆಗಾಗಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಪಶ್ಚಿವ ಬಂಗಾಳದ ಅಭಿವೃದ್ಧಿ ಮಾದರಿಯನ್ನು ತ್ರಿಪುರಾದಲ್ಲೂ ಜಾರಿ ಮಾಡುವುದಾಗಿ ಟಿಎಂಸಿ ಭರವಸೆ ನೀಡಿದೆ.

ಎರಡು ಲಕ್ಷ ಉದ್ಯೋಗ ಸೃಷ್ಟಿ, 4ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ₹1 ಸಾವಿರ ವಿದ್ಯಾರ್ಥಿ ವೇತನ, ನಿರುದ್ಯೋಗಿಗಳಿಗೆ ₹1 ಸಾವಿರ ನಿರುದ್ಯೋಗ ಭತ್ಯೆ, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಸೇರಿ ವಿವಿಧ ಭರವಸೆಗಳಲ್ಲಿ ಟಿಎಂಸಿ ನೀಡಿದೆ.

ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು ಸುದ್ದಿಗೋಷ್ಠಿ ನಡೆಸಿ, ‘ಅಧಿಕಾರಕ್ಕೆ ಬಂದರೆ, ಐದು ವರ್ಷಗಳಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಮೊದಲ ವರ್ಷದಲ್ಲೇ 50 ಸಾವಿರ ಉದ್ಯೋಗ ಸೃಷ್ಟಿಸಲಾಗುವುದು. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲಾಗುವುದು’ ಎಂದರು.

ADVERTISEMENT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಮಮತಾ ಬ್ಯಾನರ್ಜಿ ಅವರು ತ್ರಿಪುರಾಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲು ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಫೆ. 16ರಂದು ನಡೆಯುವ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಟಿಎಂಸಿ ಸ್ಪರ್ಧಿಸಿದೆ.

ಇತರ ಭರವಸೆ
* ಕೆಲಸದಿಂದ ಕೈಬಿಡಲಾದ 10,323 ಶಿಕ್ಷಕರಿಗೂ ತಿಂಗಳಿಗೆ ₹1 ಸಾವಿರ ನಿರುದ್ಯೋಗ ಭತ್ಯೆ
* ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸುಲಭ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗಾಗಿ ಕ್ರೆಡಿಟ್‌ ಕಾರ್ಡ್‌
* ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಾದ ‘ಕನ್ಯಾಶ್ರೀ’ ಹಾಗೂ ‘ಲಕ್ಷ್ಮಿ ಭಂದಾರ್‌’ ಯೋಜನೆಗಳ ಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.