
ಕೋಲ್ಕತ್ತ: ಜಮೀನು ಹಾಗೂ ಜಲಕಾಯಗಳನ್ನು ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡ ಆರೋಪ ಎದುರಿಸುತ್ತಿರುವ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಬಂಧಿಸಲು ಸಂದೇಶ್‌ಖಾಲಿಗೆ ತೆರಳಿದ್ದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ 6 ಜನ ಪೊಲೀಸರು ಗಾಯಗೊಂಡಿದ್ದು, ಒಂದು ಪೊಲೀಸ್ ವಾಹನ ಧ್ವಂಸಗೊಂಡಿದೆ.
ಆರೋಪಿಯಾಗಿರುವ ಟಿಎಂಸಿ ಕಾರ್ಯಕರ್ತ ಮುಸಾ ಮೊಲ್ಲಾ ಎಂಬಾತನನ್ನು ಬಂಧಿಸಲು ನಜತ್ ಠಾಣೆ ಪೊಲೀಸರು ಬೊಯರ್‌ಮಾರಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ದಾಳಿಗೆ ಸಂಬಂಧಿಸಿ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದ್ದಾರೆ.
ಬರುವ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಘಟನೆಯು ರಾಜ್ಯದ ಕರಾವಳಿ ಪ್ರದೇಶವನ್ನು ಮತ್ತೊಮ್ಮೆ ರಾಜಕೀಯ ಜಟಾಪಟಿಯ ಕೇಂದ್ರಬಿಂದುವಾಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
‘ಗ್ರಾಮಕ್ಕೆ ತೆರಳಿದ್ದ ಪೊಲೀಸರು, ಮೊಲ್ಲಾನನ್ನು ಆತನ ನಿವಾಸದಲ್ಲಿ ಬಂಧಿಸಿ, ಪೊಲೀಸ್ ವಾಹನದಲ್ಲಿ ಕೂಡ್ರಿಸಲು ಯತ್ನಿಸಿದರು. ಈ ವೇಳೆ, ಗ್ರಾಮಸ್ಥರಿದ್ದ ಗುಂಪೊಂದು ವಾಹನವನ್ನು ಅಡ್ಡಗಟ್ಟಿ, ಕಲ್ಲು ತೂರಾಟ ನಡೆಸಿತು. ನಂತರ ವಾಹನವನ್ನು ಧ್ವಂಸಗೊಳಿಸಿತು’ ಎಂದು ಪೊಲೀಸರು ಹೇಳಿದ್ದಾರೆ.
‘ಈ ವೇಳೆ ಉಂಟಾದ ಉದ್ರಿಕ್ತ ಪರಿಸ್ಥಿತಿಯ ಲಾಭ ಮಾಡಿಕೊಂಡ ಮೊಲ್ಲಾ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.
ತಮ್ಮ ಕರ್ತವ್ಯ ನಿಭಾಯಿಸಿರುವ ಪೊಲೀಸರ ಮೇಲೆ ದಾಳಿ ನಡೆಸಿರುವುದು ವಿಷಾದನೀಯ. ಪಕ್ಷವು ಇಂಥ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಆದರೆ ವಿಪಕ್ಷಗಳು ಈ ಘಟನೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿವೆಅರೂಪ್ ಚಕ್ರವರ್ತಿ ಟಿಎಂಸಿ ವಕ್ತಾರ
ಈ ಘಟನೆಯು ಆಡಳಿತಾರೂಢ ಪಕ್ಷ ಟಿಎಂಸಿ ಕಾರ್ಯಕರ್ತರಲ್ಲಿನ ಹತಾಶೆ ಹಾಗೂ ನಿರ್ಲಜ್ಜತನ ತೋರಿಸುತ್ತದೆ. ಈ ಹಿಂದೆ ಕೇಂದ್ರೀಯ ಸಂಸ್ಥೆಗಳ ಸಿಬ್ಬಂದಿ ಮೇಲೆ ದಾಳಿ ನಡೆದಿತ್ತು ಈಗ ರಾಜ್ಯ ಪೊಲೀಸರ ಮೇಲೆ ನಡೆದಿದೆಸಜಲ್ ಘೋಷ್ ಬಿಜೆಪಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.