ADVERTISEMENT

ಮಿಚಾಂಗ್‌ ಸೈಕ್ಲೋನ್‌: ಸಂತ್ರಸ್ತರಿಗೆ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಸ್ಟಾಲಿನ್

ಪಿಟಿಐ
Published 17 ಡಿಸೆಂಬರ್ 2023, 10:23 IST
Last Updated 17 ಡಿಸೆಂಬರ್ 2023, 10:23 IST
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಮಿಚಾಂಗ್‌ ಚಂಡಮಾರುತದಿಂದ ಉಂಟಾದ ಮಳೆ ಮತ್ತು ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಲಾ ₹ 6,000 ನಗದು ಪ್ರವಾಹ ಪರಿಹಾರ ಬಿಡುಗಡೆ ಮಾಡಿದರು.

ರಾಜ್ಯ ಸರ್ಕಾರ ನಗದು ನೆರವು ನೀಡಲು ₹1,486 ಕೋಟಿಗಳನ್ನು ಮಂಜೂರು ಮಾಡಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿರುವ ಸುಮಾರು 25 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.

ಪ್ರವಾಹದಿಂದ ಅತಿಹೆಚ್ಚು ಹಾನಿಗೊಳಗಾದ ವೆಲಚೇರಿಯಲ್ಲಿ ಸಂತ್ರಸ್ತ ಕುಟುಂಬದ ಮಹಿಳೆಗೆ ಭಾನುವಾರ ನಗದು ನೀಡುವ ಮೂಲಕ ಸಿಎಂ ಸ್ಟಾಲಿನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯದ ಸಚಿವರು, ಚುನಾಯಿತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ADVERTISEMENT

ಒಟ್ಟು 24,25,336 ಕುಟುಂಬಗಳು ಪರಿಹಾರದ ಪ್ರಯೋಜನ ಪಡೆಯಲಿವೆ. ಚೆನ್ನೈನಲ್ಲಿ ಹೆಚ್ಚಿನ ಫಲಾನುಭವಿಗಳು ಅಂದರೆ ಸರಿಸುಮಾರು 13.72 ಲಕ್ಷ ಕುಟುಂಬಗಳು, ತಿರುವಳ್ಳೂರ್‌ನಲ್ಲಿ 6.08 ಲಕ್ಷ, ಚೆಂಗೆಲ್‌ಪೇಟ್‌ನಲ್ಲಿ 3.12 ಲಕ್ಷ ಹಾಗೂ ಕಾಂಚೀಪುರಂನಲ್ಲಿ 1,31,149 ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.

ನಗದು ಪರಿಹಾರವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಂಗಡಿಗಳಲ್ಲಿ ವಿತರಿಸಲಾಗುತ್ತದೆ.

ಮಿಚಾಂಗ್‌ ಚಂಡಮಾರುತದಿಂದಾಗಿ ಡಿಸೆಂಬರ್ 3 ಮತ್ತು 4 ರಂದು ಚೆನ್ನೈ ಮತ್ತು ಸಮೀಪದ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ನಗದು ಸಹಾಯ ನೀಡುವುದಾಗಿ ಡಿಸೆಂಬರ್ 9ರಂದು ಸಿಎಂ ಸ್ಟಾಲಿನ್‌ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.