ADVERTISEMENT

ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು: BJP ವಿರುದ್ಧ ಕೇಜ್ರಿವಾಲ್ ಕಿಡಿ

ಪಿಟಿಐ
Published 24 ಮಾರ್ಚ್ 2025, 4:33 IST
Last Updated 24 ಮಾರ್ಚ್ 2025, 4:33 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಸಮಾಜ ಸುಧಾರಕ ಭೀಮರಾವ್ ಅಂಬೇಡ್ಕರ್ ಅವರ ಪರಂಪರೆಯನ್ನು ಬಿಜೆಪಿ ಕಡೆಗಣಿಸಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

‘ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು’ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ‘ಏಕ್ ಶಾಮ್ ಶಹೀದೋಂ ಕೆ ನಾಮ್’ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರ ಕನಸುಗಳನ್ನು ನನಸಾಗಿಸಲು ತಮ್ಮ ಪಕ್ಷ ರಾಜಕೀಯ ಪ್ರವೇಶಿಸಿದೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಭಗತ್‌ ಸಿಂಗ್‌ ನಮ್ಮ ಆದರ್ಶ ವ್ಯಕ್ತಿಗಳಾಗಿದ್ದಾರೆ. ಬ್ರಿಟಿಷರನ್ನು ದೇಶದಿಂದ ತೊಲಗಿಸಿದರೆ ಸಾಲದು, ಸಮಾಜದ ರಚನೆಯೇ ಬದಲಾಗಬೇಕು. ಇಲ್ಲದಿದ್ದರೆ, ಬ್ರೌನ್ ರೂಲರ್ಸ್ ಬ್ರಿಟಿಷರ ಸ್ಥಾನದಲ್ಲಿ ಇರುತ್ತಾರೆ ಎಂದು ಭಗತ್‌ ಸಿಂಗ್‌ ಹೇಳಿದ್ದರು. ಇಂದು ಅದು ನಿಜವಾಗಿದೆ. ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರಾಗಿದ್ದಾರೆ’ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡ 48 ಗಂಟೆಗಳಲ್ಲಿಯೇ ಬಿಜೆಪಿ ಸರ್ಕಾರಿ ಕಚೇರಿಗಳಿಂದ ಭಗತ್‌ ಸಿಂಗ್‌ ಮತ್ತು ಅಂಬೇಡ್ಕರ್‌ ಅವರ ಭಾವಚಿತ್ರಗಳನ್ನು ತೆಗೆದುಹಾಕಲಾಯಿತು. ಭಗತ್‌ ಸಿಂಗ್‌ ಅವರಿಗಿಂತ ದೇಶಕ್ಕಾಗಿ ಹೆಚ್ಚು ತ್ಯಾಗ ಮಾಡಿದ ಯಾರಾದರೂ ಇದ್ದಾರೆಯೇ ಎಂದು ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಎಎಪಿ ನಾಯಕರಾದ ಮನೀಶ್‌ ಸಿಸೋಡಿಯಾ, ಸಂಸದ ಸಂಜಯ್‌ ಸಿಂಗ್‌, ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ, ದೆಹಲಿ ಎಎಪಿ ಘಟಕದ ಅಧ್ಯಕ್ಷ ಸೌರಭ್‌ ಭಾರದ್ವಾಜ್‌, ಗೋಪಾಲ್‌ ರೈ, ಶಾಸಕರು ಮತ್ತು ಪಕ್ಷದ ಇತರ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.