ನವದೆಹಲಿ: ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗಳಿಸಿರುವ ಭಾರತದ ಕ್ರೀಡಾಪಟುಗಳನ್ನು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದಿಸಿದ್ದಾರೆ.
ಕಂಚಿನ ಪದಕ ಪಡೆದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ರಜತ ಪದಕ ಪಡೆದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಸಾಧನೆ ಎಲ್ಲ ಗ್ರಾಮೀಣ ಹೆಣ್ಣು ಮಕ್ಕಳಿಗೆ ಮಾದರಿ ಎಂದು ಅವರು ಹೇಳಿದ್ದಾರೆ.
ಒಲಿಂಪಿಕ್‌ನಲ್ಲಿ ಸತತ ಎರಡನೇ ಬಾರಿ ಪದಕ ಗಳಿಸಿರುವ ಸಿಂಧು ಅವರ ಸಾಧನೆ ಅನುಕರಣೀಯ ಎಂದು ಅವರು ತಿಳಿಸಿದ್ದಾರೆ.
ಬಡ ಕುಟುಂಬದ ಮೀರಾಬಾಯಿ ಮಣಿಪುರದ ಕುಗ್ರಾಮದಲ್ಲಿ ಹುಟ್ಟಿ ಬೆಳೆದರೂ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದು ನಾಡಿನ ಹೆಮ್ಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೀರಾಬಾಯಿ ಅವರ ತಾಯಿ ರಸ್ತೆ ಪಕ್ಕ ಇಟ್ಟುಕೊಂಡಿದ್ದ ಚಹಾ ಅಂಗಡಿ ಮತ್ತು ಮನೆಯಲ್ಲಿ ಒಲೆ ಉರಿಸಲು ಸೌದೆ ತರುತ್ತಿದ್ದರು. ಅವರ ತಂದೆ ಪಿಡಬ್ಲುಡಿಯಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದರು.
ಒಲಿಂಪಿಕ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಸೆಮಿಫೈನಲ್ ತಲುಪಿದ್ದು ಸಾಧನೆ. ಅವರಿಂದಲೂ ದೇಶ ಪದಕ ನಿರೀಕ್ಷಿಸುತ್ತಿದ್ದು, ಶುಭವಾಗಲಿ ಎಂದು ಅವರು ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.