ADVERTISEMENT

ಬಾರಾಮುಲ್ಲ: ಎಲ್‌ಇಟಿಯ ಅತ್ಯುನ್ನತ ಕಮಾಂಡರ್‌ ಹತ್ಯೆ, ಮೂವರು ಯೋಧರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 12:12 IST
Last Updated 21 ಏಪ್ರಿಲ್ 2022, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪರಿಸ್ವಾನಿ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಲಷ್ಕರ್‌–ಎ–ತಯಬ (ಎಲ್‌ಇಟಿ) ಸಂಘಟನೆಯ ಅತ್ಯುನ್ನತ ಕಮಾಂಡರ್‌ ಮೊಹಮ್ಮದ್‌ ಯೂಸುಫ್‌ ಕಂತ್ರೂ ಸೇರಿ ಇಬ್ಬರು ಉಗ್ರರು ಹತರಾಗಿದ್ದು, ಮೂವರು ಯೋಧರು, ನಾಗರಿಕರೊಬ್ಬರು ಗಾಯಗೊಂಡಿದ್ದಾರೆ.

‘ಪರಿಸ್ವಾನಿ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ, ಸಿಆರ್‌ಪಿಎಫ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಎನ್‌ಕೌಂಟರ್‌ ಆರಂಭದ ಹಂತದಲ್ಲಿ ಮೂವರು ಯೋಧರು ಹಾಗೂ ನಾಗರಿಕರೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳ ಪ್ರತಿದಾಳಿಗೆ ಎಲ್‌ಇಟಿ ಕಮಾಂಡರ್‌ ಸೇರಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

‘ಬುಡ್ಗಾಂ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಪೊಲೀಸ್‌ ಅಧಿಕಾರಿ ಹಾಗೂ ಆತನ ಸಹೋದರ, ಯೋಧ ಹಾಗೂ ನಾಗರಿಕರೊಬ್ಬರ ಹತ್ಯೆ ಸೇರಿದಂತೆ ಅನೇಕ ನಾಗರಿಕರ ಹಾಗೂ ಭದ್ರತಾ ಪಡೆ ಸಿಬ್ಬಂದಿಯ ಹತ್ಯೆ ಪ್ರಕರಣಗಳಲ್ಲಿ ಎಲ್‌ಇಟಿಯ ಕಮಾಂಡರ್‌ ಯೂಸುಫ್‌ ಭಾಗಿಯಾಗಿದ್ದ' ಎಂದು ಅವರು ಹೇಳಿದರು.

ADVERTISEMENT

‘ಎಲ್‌ಇಟಿಯ ಅತ್ಯುನ್ನತ ಕಮಾಂಡರ್‌ನನ್ನು ಕೊಂದಿರುವುದು ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು. ಈತ ಕಣಿವೆಯಲ್ಲಿ ಕಳೆದ 20 ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.