
ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬ ಚರ್ಚೆ ನಡೆದಿದೆ.
ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ₹ 5,000 ಕೋಟಿ ಅನುದಾನ ನೀಡಲು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್) ನಿರ್ಧರಿಸಿದೆ. ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಉಕ್ಕು, ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ಆರು ತಿಂಗಳ ಹೆಣ್ಣು ಮಗುವನ್ನು ₹ 50 ಸಾವಿರಕ್ಕೆ ಮಾರಾಟ ಮಾಡಿದ ಆರೋಪದ ಮೇರೆಗೆ ಪೋಷಕರು ಸೇರಿ ಐವರನ್ನು ಬಂಧಿಸಿ, ಮಗುವನ್ನು ರಕ್ಷಿಸಲಾಗಿದೆ. ಮಗುವನ್ನು ಮಾರಾಟ ಮಾಡಿದ್ದ ಇಲ್ಲಿನ ರಾಮಸಮುದ್ರದ ದಂಪತಿ, ಮಗುವನ್ನು ಪಡೆದಿದ್ದ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರಿನ ದಂಪತಿ ಹಾಗೂ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಡಿ ಗ್ರೂಪ್ ನೌಕರರಾದ ಮಧ್ಯವರ್ತಿ ಶಾಂತಾ ಬಂಧಿತರು.
ಕರ್ನಾಟಕದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಅವರ ಅಭಿವೃದ್ಧಿಗೆ ‘ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ದಿ ಮಂಡಳಿ’ ಸ್ಥಾಪಿಸುವಂತೆ ಸಮೀಕ್ಷಾ ವರದಿ ಶಿಫಾರಸು ಮಾಡಿದೆ.
ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ನಗರದ ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‌ನ ಟ್ರಸ್ಟಿಗಳಿಗೆ ಸೇರಿದ ₹19.46 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ.
‘ಎಸ್‌ಐಆರ್ ಎಲ್ಲೆಲ್ಲಿ ನಡೆಯುತ್ತದೆಯೊ ಅಲ್ಲೆಲ್ಲಾ ಮತಗಳ್ಳತನ ನಡೆಯುತ್ತದೆ. ಗುಜರಾತ್‌ನಲ್ಲಿ ನಡೆಯುತ್ತಿರುವುದು ಆಡಳಿತಾತ್ಮಕವಾದ ಎಸ್‌ಐಆರ್ ಪ್ರಕ್ರಿಯೆ ಅಲ್ಲ. ಅಲ್ಲಿ ನಡೆಯುತ್ತಿರುವುದು ಯೋಜಿತ ಸಂಘಟಿತ ಮತ್ತು ಕಾರ್ಯತಂತ್ರದ ಭಾಗವಾದ ಮತಗಳ್ಳತನ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಯನ್ನು ಪೂರ್ಣಗೊಳಿಸಿದೆ. ಪ್ರಕರಣದಲ್ಲಿ ತುಪ್ಪ ಪೂರೈಕೆದಾರರು, ಟಿಟಿಡಿಯ ನೌಕರರು ಹಾಗೂ ಇತರರನ್ನು ಆರೋಪಿಗಳು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಅಫ್ಗಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಪಡೆಗಳು ಮುಂಚೂಣಿಯಲ್ಲಿ ನಿಲ್ಲದೆ, ಹಿಂದೆ ಸರಿದಿದ್ದವು ಎಂದು ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸನ್ ತರಾಟೆಗೆ ತೆಗೆದುಕೊಂಡರು.
ಬಾಂಗ್ಲಾದೇಶ ತಂಡವನ್ನು ಮುಂಬರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಕೊಕ್ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶನಿವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು. ಅದರೊಂದಿಗೆ, ಹಾಲಿ ಆವೃತ್ತಿಯಲ್ಲಿ ಸ್ಮೃತಿ ಮಂದಾನ ಪಡೆಯ ಗೆಲುವಿನ ಓಟಕ್ಕೆ ತಡೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.