ADVERTISEMENT

ಕೊರೊನಾ ಹರಡುವಿಕೆ ತಡೆಗೆ ಭಾರತದಲ್ಲಿ ಕೆಲವು ವಾರ ಲಾಕ್‌ಡೌನ್ ಸೂಕ್ತ: ಆಂಥೋನಿ ಫೌಸಿ

ಪಿಟಿಐ
Published 1 ಮೇ 2021, 10:22 IST
Last Updated 1 ಮೇ 2021, 10:22 IST
ಅಮೆರಿಕದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ: ರಾಯಿಟರ್ಸ್ ಚಿತ್ರ
ಅಮೆರಿಕದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ: ರಾಯಿಟರ್ಸ್ ಚಿತ್ರ   

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ತಕ್ಷಣದ ಹೆಜ್ಜೆಯಾಗಿ ಭಾರತದಲ್ಲಿ ಕೆಲವು ವಾರಗಳವರೆಗೆ ಲಾಕ್‌ಡೌನ್ ಮಾಡುವುದು ಸೂಕ್ತ. ಏಕೆಂದರೆ, ಕೋವಿಡ್‌ನ ಮಾರಕ ಎರಡನೇ ಅಲೆಯ ಪರಿಣಾಮ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದು ಅಮೆರಿಕದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಸಲಹೆ ನೀಡಿದ್ದಾರೆ.

ತಕ್ಷಣವೇ ಮಾಡಬೇಕಾದ ಮತ್ತೊಂದು ಪ್ರಮುಖ ಕೆಲಸವೆಂದರೆ, ಸೂಕ್ತ ಪ್ರಮಾಣದ ಆಮ್ಲಜನಕ, ಔಷಧಿ, ಪಿಪಿಇ ಕಿಟ್‌ಗಳನ್ನು ಪೂರೈಸುವುದು ಎಂದು ಫೌಸಿ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಕ್ಕಟ್ಟಿನ ಪ್ರಮಾಣವನ್ನು ನೋಡಿದರೆ, ಭಾರತವು ಕೊರೊನಾ ಕಾರ್ಯಪಡೆಗಳನ್ನು ಒಟ್ಟುಗೂಡಿಸುವತ್ತ ಗಮನಹರಿಸಬೇಕು ಎಂದಿದ್ದಾರೆ.

ADVERTISEMENT

ಯಾವುದೇ ದೇಶ, ಸರ್ಕಾರವನ್ನು ಉಲ್ಲೇಖಿಸದ ಅವರು, ‘ಕೊರೊನಾ ವಿರುದ್ಧದ ವಿಜಯವನ್ನು ಅಕಾಲಿಕವಾಗಿ ಘೋಷಿಸಲಾಗಿದೆ’ ಎಂದಿದ್ದಾರೆ.

‘ನೀವು ಈಗ ನಿಜವಾಗಿಯೂ ಮಾಡಬೇಕಾದ ಕೆಲಸವೆಂದರೆ, ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ, ದೇಶವನ್ನು ತಾತ್ಕಾಲಿಕವಾಗಿ ಲಾಕ್‌ಡೌನ್ ಮಾಡಿಬಿಡಿ. ಸದ್ಯ ಇದೇ ಮುಖ್ಯವೆಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

‘ತಕ್ಷಣದ ಪ್ರಮುಖ ವಿಷಯವೆಂದರೆ ಆಮ್ಲಜನಕವನ್ನು ಸೂಕ್ತ ಸಮಯದಲ್ಲಿ ರೋಗಿಗಳಿಗೆ ನೀಡುವುದು, ಅಗತ್ಯವಿರುವೆಡೆ ಸರಬರಾಜು ಮಾಡುವುದು ಮತ್ತು ಔಷಧಿಗಳು, ಪಿಪಿಇ ಕಿಟ್‌ಗಳನ್ನು ಒದಗಿಸುವುದಾಗಿದೆ. ಇದರ ಜೊತೆಗೆ ತಕ್ಷಣ ದೇಶವನ್ನು ಲಾಕ್‌ಡೌನ್ ಮಾಡುವುದು ಸೂಕ್ತ’ ಎಂದು ಅಮೆರಿಕ ಅಧ್ಯಕ್ಷ ಜೈ ಬೈಡನ್ ಅವರ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರರಾಗಿರುವ ಫೌಸಿ ಹೇಳಿದ್ದಾರೆ.

ವರ್ಷದ ಹಿಂದೆ ಚೀನಾದಲ್ಲಿ ಕೊರೊನಾ ಉಲ್ಬಣಗೊಂಡಾಗ ಸಂಪೂರ್ಣ ದೇಶವನ್ನು ಲಾಕ್‌ಡೌನ್ ಮಾಡಿದ್ದರು ಎಂದು ಅವರು ಹೇಳಿದರು.

ಆರು ತಿಂಗಳ ಕಾಲ ಲಾಕ್ ಡೌನ್ ಅಗತ್ಯವಿಲ್ಲ, ಆದರೆ, ಸದ್ಯ ವೈರಸ್ ಹರಡುವಿಕೆಯ ಚಕ್ರವನ್ನು ಕೊನೆಗಾಣಿಸಲು ತಾತ್ಕಾಲಿಕವಾಗಿ ಲಾಕ್ ಮಾಡಬಹುದು ಎಂದು ಫೌಸಿ ಹೇಳಿದ್ದಾರೆ.

‘ಲಾಕ್ ಡೌನ್ ಮಾಡುವುದರಿಂದ ಕೋವಿಡ್ ಹರಡುವಿಕೆಯ ಪ್ರಮಾಣ ಕುಗ್ಗುತ್ತಿದೆ. 6 ತಿಂಗಳು ದೇಶವನ್ನು ಲಾಕ್ ಮಾಡಲು ಯಾರೂ ಇಷ್ಟಪಡುವುದಿಲ್ಲ. ಸರಿ, ಅದರ ಬದಲು ಕೊರೊನಾ ಚೈನ್ ಕತ್ತರಿಸಲು ಚಿಕ್ಕ ಲಾಕ್ ಡೌನ್ ಮಾಡಬಹುದು’ ಎಂದು ಅವರು ಹೇಳಿದರು.

ಕೆಲವೇ ವಾರಗಳ ಲಾಕ್‌ಡೌನ್ ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ ಮಹತ್ವದ ಫಲಿತಾಂಶ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು, ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಾಕ್ ಡೌನ್ ‘ಕೊನೆಯ ಉಪಾಯ’ ವಾಗಿರಬೇಕು ಎಂದು ರಾಜ್ಯಗಳಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.