ನವದೆಹಲಿ: ರೈಲಿನಲ್ಲಿ ಆಹಾರವನ್ನು ನಿಗದಿತ ಬೆಲೆಗಿಂತ ಹೆಚ್ಚು ದರಕ್ಕೆ ಮಾರುತ್ತಿದ್ದ ದೃಶ್ಯವನ್ನು ವಿಡಿಯೊ ಮಾಡಿದ್ದಕ್ಕಾಗಿ ಪ್ರಯಾಣಿಕರೊಬ್ಬರ ಮೇಲೆ ರೈಲ್ವೆ ಕ್ಯಾಟರಿಂಗ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ರಾಜಸ್ಥಾನ ಹೋಟೆಲ್‌ನಿಂದ ಹೇಮಕುಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಹಾರ ಮಾರುವ ವೇಳೆ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೊ ಮಾಡಿರುವ 26 ವರ್ಷದ ಬಲ್ವಾನ್ ದಾಸ್ ಹೇಳಿದ್ದಾರೆ.
ಜಮ್ಮು ಮೂಲದವರಾದ ದಾಸ್, ‘ವಿಶಾಲ್ ಶರ್ಮಾ’ ಎನ್ನುವ ಹೆಸರಿನ ಎಕ್ಸ್ ಖಾತೆ ಹೊಂದಿದ್ದಾರೆ. ಇವರು ರೈಲಿನಲ್ಲಿ ನಡೆದ ಘಟನೆಯನ್ನು ರಹಸ್ಯ ಕ್ಯಾಮರಾ ಮತ್ತು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ.
ತಮ್ಮ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೈಲಿನಲ್ಲಿ ಹೆಚ್ಚಿನ ಬೆಲೆಗೆ ಆಹಾರವನ್ನು ಮಾರುವ ವಿಡಿಯೊವನ್ನೂ ಶೇರ್ ಮಾಡಿದ್ದಾರೆ.
‘ಋಷಿಕೇಶದಲ್ಲಿ ಏ.6ರಂದು ಸಂಜೆ 5 ಗಂಟೆಗೆ ಹೇಮಕುಂಡ್ ಎಕ್ಸ್‌ಪ್ರೆಕ್ ರೈಲು ಹತ್ತಿದ್ದೆ. ಕ್ಯಾಟರಿಂಗ್ ಸಿಬ್ಬಂದಿ ಬಳಿ ನೀರಿನ ಬಾಟಲಿ ಖರೀದಿಸಿದಾಗ ಅವರು ₹15 ಬಾಟಲಿಗೆ ₹20 ಬೆಲೆ ಹೇಳಿದ್ದರು. ಅದೂ ಸ್ಥಳೀಯ ಬ್ರ್ಯಾಂಡ್ ಬಾಟಲಿ ನೀಡಿದ್ದರು. ಅದರ ಜತೆಗೆ ನೂಡಲ್ಸ್, ಕಾಫಿ ಸೇರಿ ಇತರ ತಿಂಡಿಗಳನ್ನು ಖರೀದಿಸಿದ್ದೆ ಕೊನೆಯಲ್ಲಿ ಬಿಲ್ ಕೇಳಿದರೆ ಅದನ್ನು ನೀಡಲು ಸಿಬ್ಬಂದಿ ನಿರಾಕರಿಸಿದರು. ನನ್ನ ರಹಸ್ಯ ಕ್ಯಾಮರ ಮೂಲಕ ಎಲ್ಲವನ್ನೂ ಸೆರೆಹಿಡಿದಿದ್ದೆ. ಅದನ್ನು ಆಧರಿಸಿ 139 ಸಹಾಯವಾಣಿಯಲ್ಲಿ ದೂರು ದಾಖಲಿಸಿದ್ದೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಲ್ಲಿಂದ ಸಂದೇಶ ಬಂದಿತ್ತು’ ಎಂದಿದ್ದಾರೆ.
‘ಆದರೆ ರಾತ್ರಿ 9 ಗಂಟೆಯ ಹೊತ್ತಿಗೆ ಕ್ಯಾಟರಿಂಗ್ ಸಿಬ್ಬಂದಿ ಬಂದು ರೈಲಿನ ಆಹಾರ ಸಂಗ್ರಹಿಸುವ ಜಾಗಕ್ಕೆ ಬರುವಂತೆ ಕರೆದರು. ನಾನು ಹೋಗಲಿಲ್ಲ. ಬೆಳಗಿನ ಜಾವ ಮತ್ತೆ ಸಿಬ್ಬಂದಿ ಬಂದು ನನ್ನನ್ನು ಬಲವಂತವಾಗಿ ಎಬ್ಬಿಸಲು ಯತ್ನಿಸಿದರು. ನಾನು ಏಳದ ಕಾರಣ ಇಬ್ಬರು ಮೇಲೆ ಹತ್ತಿ ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ತಪ್ಪಿಸಿಕೊಂಡರೂ 15 ನಿಮಿಷಗಳ ಕಾಲ ನನ್ನನ್ನು ಬೆದರಿಸುತ್ತಿದ್ದರು. ಅವರು ತೆರಳಿದ ಬಳಿಕ ಮತ್ತೆ 139ರಲ್ಲಿ ದೂರು ದಾಖಲಿಸಿದ್ದೆ. ಕಥುವಾದಲ್ಲಿ ಇಳಿದು ದೂರನ್ನೂ ನೀಡಿದ್ದೆ’ ಎಂದು ವಿವರಿಸಿದ್ದಾರೆ.
ಸಿಬ್ಬಂದಿ ನನ್ನ ₹70 ಸಾವಿರ ಮೌಲ್ಯದ ಕ್ಯಾಮೆರಾವನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಿರುವ ದಾಸ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಳಿ ಸಹಾಯಕ್ಕೆ ಕೋರಿದ್ದರು. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ರೈಲ್ವೆ ಸಚಿವಾಲಯ ರಾಜಸ್ಥಾನ್ ಹೋಟೆಲ್ ಜತೆಗಿನ ಗುತ್ತಿಗೆ ರದ್ದು ಮಾಡಿ, ₹5 ಲಕ್ಷ ದಂಡ ವಿಧಿಸಿದೆ. ಜತೆಗೆ ದಾಸ್ ಅವರ ಮೇಲೆ ಹಲ್ಲೆ ಮಾಡಿದ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.