ಸಾಂದರ್ಭಿಕ ಚಿತ್ರ
(ಪಿಟಿಐ)
ಲಖನೌ: ಉತ್ತರ ಪ್ರದೇಶದ ವಿವಿಧ ಪಟ್ಟಣಗಳಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಾಚೀನ ಹಿಂದೂ ದೇವಾಲಯಗಳನ್ನು ಅನ್ವೇಷಿಸುವ ಬೆಳವಣಿಗೆ ಮುಂದುವರಿದಿದೆ. ಕಳೆದ ಒಂದು ವಾರದಲ್ಲಿ ಆರಕ್ಕೂ ಹೆಚ್ಚು ದೇಗುಲಗಳನ್ನು ಪತ್ತೆಹಚ್ಚಲಾಗಿದೆ.
ಮರೆಮಾಚಿದ ಸ್ಥಿತಿಯಲ್ಲಿರುವ ಪ್ರಾಚೀನ ದೇಗುಲಗಳನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪತ್ತೆ ಮಾಡಿದ್ದು, ದೇವಾಲಯಗಳ ವಿಡಿಯೊ ಚಿತ್ರೀಕರಿಸಿ, ನಿತ್ಯ ಪೂಜೆಗಾಗಿ ಬಾಗಿಲು ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಭವನದ ಸಮೀಪದಲ್ಲಿ ಮುಸ್ಲಿಮರು ನಿರ್ಮಿಸಿರುವ ಸಂಕೀರ್ಣದ ನೆಲಮಾಳಿಗೆಯಲ್ಲಿ ರಾಧಾ-ಕೃಷ್ಣ ದೇವಾಲಯವನ್ನು ಗುರುವಾರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪತ್ತೆ ಮಾಡಿದ್ದು, ಸಂಕೀರ್ಣದ ಮಾಲೀಕರು ದೇಗುಲ ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಬ್ರಾಹ್ಮಣ ಸಂಸದ್ ಅಧ್ಯಕ್ಷ ಅಮರನಾಥ್ ಮಿಶ್ರಾ ಅವರು ಲಖನೌ ಅಭಿವೃದ್ಧಿ ಪ್ರಾಧಿಕಾರದ (ಎಲ್‌ಡಿಎ) ಅಧಿಕಾರಿಗಳನ್ನು ಭೇಟಿ ಮಾಡಿ, ‘ಇಲ್ಲಿ ಪತ್ತೆಯಾದ ದೇವಸ್ಥಾನವು 18ನೇ ಶತಮಾನದ್ದು. ನಮಗೆ ಅಲ್ಲಿ ಪೂಜೆಗೆ ಅವಕಾಶ ನೀಡಬೇಕು. ದೇವಸ್ಥಾನ ಮರೆಮಾಚಿರುವ ಕಾಂಪ್ಲೆಕ್ಸ್ ಕೆಡವಬೇಕು’ ಎಂದು ಒತ್ತಾಯಿಸಿದರು. ಇದನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲಿಗಢ, ಮುಜಾಫ್ಫರ್‌ನಗರ, ವಾರಾಣಸಿ, ಅಮೇಠಿ ಮತ್ತು ಕಾನ್ಪುರದಲ್ಲಿ ಬಹುತೇಕ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪ್ರಾಚೀನ ದೇವಾಲಯಗಳನ್ನು ಪತ್ತೆಹಚ್ಚಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದ ಮುಸ್ಲಿಂ ಪ್ರಾಬಲ್ಯವುಳ್ಳ ಮದನಪುರದಲ್ಲಿ 250 ವರ್ಷಗಳಷ್ಟು ಹಳೆಯದಾದ ಮತ್ತೊಂದು ಪ್ರಾಚೀನ ದೇಗುಲ ಅನ್ವೇಷಿಸಲಾಗಿದೆ ಎಂದು ಸನಾತನ ರಕ್ಷಕ ದಳ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.