ಭಾರತ ಮತ್ತು ಅಮೆರಿಕ ಭದ್ರತಾ ಪಡೆಗಳು ಕೈಗೊಂಡಿದ್ದ ಜಂಟಿ ಸಮರಾಭ್ಯಾಸ ಮತ್ತು ವಿಪತ್ತು ಪರಿಹಾರ ತಾಲೀಮಿನ ಸಮಾರೋಪದಲ್ಲಿ ಯುದ್ಧನೌಕೆಗಳು ಕಂಡದ್ದು ಹೀಗೆ
–ಪಿಟಿಐ ಚಿತ್ರ
ನವದೆಹಲಿ: ಭಾರತ ಮತ್ತು ಅಮೆರಿಕ ಕಳೆದ 14 ದಿನಗಳಿಂದ ಕೈಗೊಂಡಿದ್ದ ದ್ವಿಪಕ್ಷೀಯ ಮೂರು ಮೂರು ಪಡೆಗಳ ಜಂಟಿ ಸಮರಾಭ್ಯಾಸ ಮತ್ತು ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’ (ಎಚ್‌ಎಡಿಆರ್) ಕಾರ್ಯಾಚರಣೆ ಮುಕ್ತಾಯಗೊಂಡಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಮೆರಿಕದ ಯುದ್ಧನೌಕೆ ‘ಸಾಮರ್‌ಸೆಟ್’ನಲ್ಲಿ ನೆಲ ಮತ್ತು ಜಲದಲ್ಲಿ ಕೈಗೊಂಡಿದ್ದ ತಾಲೀಮಿನ ಸಮಾರೋಪ ಸಮಾರಂಭ ಮಾರ್ಚ್ 30ರಂದು ನೆರವೇರಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ಕಾಕಿನಾಡದಲ್ಲಿ ನಡೆದ ಇಂತಹ ತಾಲೀಮಿನ ಎರಡನೇ ಆವೃತ್ತಿಯಲ್ಲಿ, ಎರಡೂ ದೇಶಗಳ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಪಾಲ್ಗೊಂಡು, ತಮ್ಮ ಶಕ್ತಿ ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಿನ ಹಸ್ತಚಾಚುವ ಸಾಮರ್ಥ್ಯಗಳ ಪ್ರದರ್ಶನ ನೀಡಿದವು.
ಮಾರ್ಚ್ 18–25ರ ವರೆಗೆ ಸಮುದ್ರತೀರದಲ್ಲಿ ತಾಲೀಮು ನಡೆದರೆ, ಮಾರ್ಚ್ 26ರಿಂದ 30 ರವರೆಗೆ ಕಡಲಿನಲ್ಲಿ ಶಕ್ತಿ ಪ್ರದರ್ಶನ ನಡೆಯಿತು.
ಎರಡೂ ದೇಶಗಳ ಭದ್ರತಾ ಪಡೆಗಳ ಸಿಬ್ಬಂದಿ ಮಾರ್ಚ್ 25ರಂದು ಹಮ್ಮಿಕೊಂಡಿದ್ದ ಹೋಳಿ ಹಬ್ಬದಲ್ಲಿ ರಂಗಿನೋಕುಳಿಯಲ್ಲಿ ಮುಳುಗಿ ಸಂಭ್ರಮಿಸಿದರು. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹೋಳಿ ಆಚರಣೆಯು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ಹೊಂದಿತ್ತು ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.