
ರಾಂಚಿ: ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿರುವ ಕುರ್ಮಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳ ಸಾವಿರಾರು ಮಂದಿ ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
‘ಆದಿವಾಸಿ ಬಚಾವೊ ಮೋರ್ಚಾ’ ಬ್ಯಾನರ್‌ನಡಿ ಆಯೋಜಿಸಿದ್ದ ‘ಆದಿವಾಸಿ ಹೂಂಕಾರ್ ಮಹಾರ‍್ಯಾಲಿ’ಯು ಧುರ್ವಾದ ಪ್ರಭಾತ್ ತಾರಾ ಮೈದಾನದಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಬುಡಕಟ್ಟಿನ 33 ಸಮುದಾಯಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು.
‘ರ‍್ಯಾಲಿಯಲ್ಲಿ ಬುಡಕಟ್ಟು ಸಮುದಾಯವು ಒಗ್ಗಟ್ಟು ಪ್ರದರ್ಶಿಸಿದೆ. ಕುರ್ಮಿ ಸಮುದಾಯದ ಮನಸ್ಥಿತಿ ಬದಲಾಗುವವರೆಗೂ ಇಂತಹ ಚಳವಳಿಗಳು ಮುಂದುವರಿಯುತ್ತವೆ’ ಎಂದು ಮಾಜಿ ಸಚಿವೆ, ಆದಿವಾಸಿ ಬಚಾವೊ ಮೋರ್ಚಾ ಸಂಚಾಲಕಿ ಗೀತಾಶ್ರೀ ಒರಾಯನ್ ತಿಳಿಸಿದರು.
‘ಜಾರ್ಖಂಡ್‌ನ ಕುರ್ಮಿಗಳು ಎಂದಿಗೂ ಬುಡಕಟ್ಟು ಜನಾಂಗವಾಗಲು ಸಾಧ್ಯವಿಲ್ಲ. ಅವರು ಎಂದಿಗೂ ಬುಡಕಟ್ಟು ಸಮುದಾಯಕ್ಕೆ ಸೇರಿರಲಿಲ್ಲ ಎಂಬುದನ್ನು ಐತಿಹಾಸಿಕ ದಾಖಲೆಗಳು ಸಾಬೀತುಪಡಿಸುತ್ತವೆ. ಅವರ ಪೂರ್ವಜರು ಸತ್ಯವನ್ನು ಕಲಿತ ನಂತರ ಬುಡಕಟ್ಟು ಜನರಿಂದ ದೂರ ಸರಿದರು’ ಎಂದು ಹೇಳಿದರು.
‘ಶಿವಾಜಿ ವಂಶಸ್ಥರು ಎಂದು ಕುರ್ಮಿಗಳು ಒಂದು ಕಾಲದಲ್ಲಿ ಹೇಳಿಕೊಂಡಿದ್ದರು. ಆದರೆ, ಈಗ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಆದಿವಾಸಿಗಳ ವಿರೋಧವಿದೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ಈ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.