ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಗೌರವ ಸಮರ್ಪಿಸುತ್ತಿರುವ ಜನರು
ಪಿಟಿಐ ಚಿತ್ರ
ನವದೆಹಲಿ: ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಗೌರವ ನಮನ ಸಲ್ಲಿಸಿದ್ದಾರೆ.
ಕರಾಳ ದಿನದ ಕುರಿತು ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, 'ಭಾರತ ಮಾತೆಗಾಗಿ ಜಲಿಯನ್ ವಾಲಾಬಾಗ್‌ನಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ತ್ಯಾಗವು, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿತು. ಭಾರತವು ಸದಾ ಅವರಿಗೆ ಋಣಿಯಾಗಿರುತ್ತದೆ. ದೇಶದ ಎಲ್ಲರೂ, ಅಮರ ಹುತಾತ್ಮರಿಂದ ಸ್ಫೂರ್ತಿ ಪಡೆದು ದೇಶದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸವಿದೆ' ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ, 'ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಗೌರವ ಸಲ್ಲಿಸುತ್ತೇವೆ. ಅವರನ್ನು ಮುಂದಿನ ತಲೆಮಾರು ಸದಾ ಸ್ಮರಿಸಿಕೊಳ್ಳಲಿದೆ. ಇದು (ಹತ್ಯಾಕಾಂಡ) ದೇಶದ ಇತಿಹಾಸದಲ್ಲಿ ನಿಜಕ್ಕೂ ಕರಾಳ ಅಧ್ಯಾಯವಾಗಿದೆ. ಅವರ ತ್ಯಾಗವು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ತಿರುವು ನೀಡಿತು' ಎಂದು ಟ್ವೀಟ್ ಮಾಡಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ ರಾಜಕೀಯ ನಾಯಕರು, ವಿವಿಧ ಕ್ಷೇತ್ರಗಳ ಗಣ್ಯರೂ ಹತ್ಯಾಕಾಂಡದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಬ್ರಿಟಿಷರ 'ರೌಲತ್ ಕಾಯಿದೆ' ವಿರುದ್ಧ ಪ್ರತಿಭಟಿಸಲು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ 1919ರ ಏಪ್ರಿಲ್ 13ರಂದು ಸಾವಿರಾರು ಸ್ವಾತಂತ್ಯ್ರ ಹೋರಾಟಗಾರರು ಸೇರಿದ್ದರು. ಶಾಂತಿಯುತವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದ ಅವರ ಮೇಲೆ ಬ್ರಿಟಿಷ್ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಾವಿರಾರು ಸ್ವಾತಂತ್ರ್ಯ ಯೋಧರು ಹುತಾತ್ಮರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.