ADVERTISEMENT

ಅಭಿಷೇಕ್ ಬ್ಯಾನರ್ಜಿಗೆ ಮತ್ತೆ ಇ.ಡಿಯಿಂದ ಸಮನ್ಸ್: ಬಿಜೆಪಿ ವಿರುದ್ಧ ಟಿಎಂಸಿ ಟೀಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 15:37 IST
Last Updated 8 ನವೆಂಬರ್ 2023, 15:37 IST
ಇ.ಡಿ
ಇ.ಡಿ   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಸಮನ್ಸ್‌ ನೀಡಿರುವ ಜಾರಿ ನಿರ್ದೇಶನಾಲಯ (ಇ.ಡಿ), ನವೆಂಬರ್ 9ರಂದು ತನ್ನೆದುರು ಹಾಜರಾಗುವಂತೆ ಅವರಿಗೆ ಹೇಳಿದೆ. ಇ.ಡಿಯ ಈ ನಡೆಯನ್ನು ಪಕ್ಷವು ‘ವಿಕೃತ ಆನಂದ’ ಎಂದು ಕರೆದಿದೆ.

ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದ ರಾಜ್ಯ ಸಚಿವ ಶಶಿ ಪಂಜಾ, ‘ದುರ್ಗಾ ಪೂಜೆ ದಿವಸ ದುರ್ಗಾ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವ ಮೊದಲೇ ಸಚಿವರೊಬ್ಬರಿಗೆ ಸಮನ್ಸ್‌ ನೀಡಲಾಯಿತು. ಈಗ ಕಾಳಿ ಪೂಜೆ ಸಮಯ. ಮಮತಾ ಬ್ಯಾನರ್ಜಿ ಅವರ ಮನೆಯಲ್ಲಿ ಕಾಳಿ ಪೂಜೆ ಏರ್ಪಡಿಸಲಾಗಿದೆ. ಈಗ ಅಭಿಷೇಕ್‌ ಬ್ಯಾನರ್ಜಿ ಅವರಿಗೆ ಸಮನ್ಸ್‌ ನೀಡಲಾಗಿದೆ. ಹೀಗೆ ಮಾಡುವುದರ ಮೂಲಕ ಬಿಜೆಪಿ ವಿಕೃತ ಆನಂದ ಅನುಭವಿಸುತ್ತದೆ’ ಎಂದು ಹೇಳಿದ್ದಾರೆ.

ಟಿಎಂಸಿಯನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ ಮತ್ತು ಮುಂದಿನ ಲೋಕಸಭೆ ಚುನಾವಣೆಯನ್ನು ಮನಸ್ಸಿನಲ್ಲಿರಿಸಿಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತನಿಖೆಗಳಿಗೆ ಕೊನೆಯಿಲ್ಲ. ಬ್ಯಾನರ್ಜಿ ಅವರೇ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂದು ಪಂಜಾ ಅವರು ಹೇಳಿದ್ದಾರೆ.

ADVERTISEMENT

‘ಪಶ್ಚಿಮ ಬಂಗಾಳದ ಆಹಾರ ಹಗರಣಕ್ಕೆ ಸಂಬಂಧಿಸಿ ರಾಜ್ಯ ಅರಣ್ಯ ವ್ಯವಹಾರಗಳು ಮತ್ತು ನವೀಕರಿಸಬಹುರಾದ ಇಂಧನ ಮೂಲಗಳ ಉಸ್ತುವಾರಿ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್‌ ಅವರನ್ನು ಅಕ್ಟೋಬರ್‌ 27ರಂದು ಬಂಧಿಸಲಾಗಿದೆ. ಅವರನ್ನು 14 ದಿನಗಳ ಇ.ಡಿ ವಶಕ್ಕೆ ನ್ಯಾಯಾಲಯ ನೀಡಿದೆ’ ಎಂದು ಇ.ಡಿ ‘ಎಕ್ಸ್‌’ನಲ್ಲಿ ಮಂಗಳವಾರ ಸಂಜೆ ಪೋಸ್ಟ್‌ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.