ADVERTISEMENT

ತ್ರಿಪುರಾ ವಿಧಾನಸಭೆ ಚುನಾವಣೆ: ಮತದಾನ ಆರಂಭ, ಎಲ್ಲೆಡೆ ಬಿಗಿ ಭದ್ರತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2023, 2:21 IST
Last Updated 16 ಫೆಬ್ರುವರಿ 2023, 2:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಗರ್ತಲಾ: ತ್ರಿಪುರಾ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಿದ್ದು ರಾಜ್ಯದ ಎಲ್ಲ ಕಡೆ ವ್ಯಾಪಕ ಬಿಗಿ ಭದ್ರತೆ ಮಾಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಗಿಟ್ಟೆ ಕಿರಣ್‌ ಕುಮಾರ್‌ ದಿನಕರ್ರೋ ತಿಳಿಸಿದರು.

ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಗೋಮತಿ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳು ಸೇರಿದಂತೆ ಬಿಜೆಪಿ, ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷಗಳು ಸ್ಪರ್ಧೆ ಮಾಡಿವೆ. ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು 6 ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

ADVERTISEMENT

ಕಾಂಗ್ರೆಸ್‌ ಪಕ್ಷ, ಕಮ್ಯುನಿಸ್ಟ್‌ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು 13 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಎಡ ಪಕ್ಷಗಳಾದ ಸಿಪಿಐ, ಫಾರ್ವರ್ಡ್‌ ಬ್ಲಾಕ್‌, ಸಿಪಿಐ(ಎಂ), ಆರ್‌ಎಸ್‌ಪಿ ಪಕ್ಷಗಳು 47 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ. ಸ್ಥಳೀಯ ಪಕ್ಷ ತ್ರಿಪುರಾ ಮೊರ್ಚಾ 42 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ.

ಸುಮಾರು 3,337 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು ಮತಗಟ್ಟೆಗಳಲ್ಲಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು 28 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.

31,000 ಚುನಾವಣಾ ಸಿಬ್ಬಂದಿ ಮತ್ತು ಕೇಂದ್ರೀಯ ಭದ್ರತಾ ಸಂಸ್ಥೆಗಳ ಸುಮಾರು 25,000 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಜ್ಯ ಸಶಸ್ತ್ರ ಪೊಲೀಸ್‌ ಪಡೆ ಮತ್ತು ರಾಜ್ಯ ಪೊಲೀಸ್‌ ಪಡೆಯ 31,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.