ADVERTISEMENT

ತ್ರಿಪುರಾ: ₹100 ಕೋಟಿ ಬೆಲೆಯ 19 ಲಕ್ಷ ಗಾಂಜಾ ಗಿಡ ನಾಶ

ಪಿಟಿಐ
Published 4 ಜನವರಿ 2026, 12:44 IST
Last Updated 4 ಜನವರಿ 2026, 12:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಗರ್ತಲಾ: ತ್ರಿಪುರಾದ ಸಿಪಾಹಿಜಾಲಾ ಜಿಲ್ಲೆಯ ವಿವಿಧೆಡೆ ಬೆಳೆಯಲಾಗಿದ್ದ, ₹100 ಕೋಟಿ ಮೌಲ್ಯದ ಒಟ್ಟು 19 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದರು. 

ರಾಜ್ಯ ಪೊಲೀಸರು, ಗಡಿ ಭ‌ದ್ರತಾ ಪಡೆ ಹಾಗೂ ತ್ರಿಪುರಾ ರಾಜ್ಯ ರೈಫಲ್ಸ್‌ ತಂಡಗಳು ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿವೆ. ಉತ್ತರ ಕಲಂಚೌರಾ, ದಕ್ಷಿಣ ಕಲಂಚೌರಾ, ಆನಂದಪುರ ಹಾಗೂ ಘಾಟಿಗಢದಲ್ಲಿರುವ ಒಟ್ಟು 650 ಎಕರೆ ಅರಣ್ಯ ಪ್ರದೇಶದಲ್ಲಿ, 600 ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. 

‘ಕಾರ್ಯಾಚರಣೆಯ ಮೊದಲು ಗಾಂಜಾ ಬೆಳೆಯನ್ನು ಪತ್ತೆ ಹಚ್ಚಲು ಪೊಲೀಸರು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಇನ್ನೂ ಸಂಪೂರ್ಣವಾಗಿ ಬೆಳೆಯದ 19 ಲಕ್ಷ ಗಾಂಜಾ ಗಿಡಗಳನ್ನು ನಾಶಗೊಳಿಸಲಾಗಿದೆ. ಗಾಂಜಾ ವಿರೋಧಿ ಕಾರ್ಯಾಚರಣೆಯು ಮುಂದುವರಿಯಲಿದೆ’ ಎಂದು ಸಿಪಾಹಿಜಾಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌ ಸೂತ್ರಧಾರ್‌ ಅವರು ತಿಳಿಸಿದರು.

ADVERTISEMENT

650 ಎಕರೆ ಅರಣ್ಯ ಪ್ರದೇಶದಲ್ಲಿ ಸ್ಥಳೀಯರು ಗಾಂಜಾ ಬೆಳೆದಿದ್ದಾರೆ. ಒಂದೇ ದಿನ ರಾಜ್ಯದಲ್ಲಿ ಇಷ್ಟು ಪ್ರಮಾಣದ ಗಾಂಜಾ ಬೆಳೆಯನ್ನು ನಾಶಗೊಳಿಸಿರುವುದು ಇದೇ ಮೊದಲು. ಇಲ್ಲಿ ಬೆಳೆದ ಗಾಂಜಾವನ್ನು ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೆಚ್ಚು ಬೆಲೆಗೆ ಮಾರಾಟವಾಗುವ ಸ್ಥಳಗಳಿಗೆ ರವಾನಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.