ADVERTISEMENT

ತ್ರಿಪುರಾ ರಾಜಕೀಯ ಹಿಂಸಾಚಾರ: ಅಮಿತ್ ಶಾ ಭೇಟಿ ಮಾಡಿದ ಟಿಎಂಸಿ ನಿಯೋಗ

ಪಿಟಿಐ
Published 23 ನವೆಂಬರ್ 2021, 2:02 IST
Last Updated 23 ನವೆಂಬರ್ 2021, 2:02 IST
ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಅವರ ನಿವಾಸದಿಂದ ತೆರಳುತ್ತಿರುವ ಟಿಎಂಸಿ ನಿಯೋಗದ ಸದಸ್ಯರು – ಪಿಟಿಐ ಚಿತ್ರ
ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಅವರ ನಿವಾಸದಿಂದ ತೆರಳುತ್ತಿರುವ ಟಿಎಂಸಿ ನಿಯೋಗದ ಸದಸ್ಯರು – ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗವು ತ್ರಿಪುರಾ ಹಿಂಸಾಚಾರ ವಿಷಯವನ್ನು ಪ್ರಸ್ತಾಪಿಸಿತು.

‘ಸಂಸದರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಮುಖಂಡರನ್ನು ಹೇಗೆ ಬಂಧಿಸಲಾಗುತ್ತಿದೆ ಎಂಬುದರ ಬಗ್ಗೆ ಶಾ ಅವರಿಗೆ ವಿವರವಾದ ಮಾಹಿತಿ ನೀಡಿದ್ದೇವೆ. ಈ ಸಂಬಂಧ, ತ್ರಿಪುರಾ ಮುಖ್ಯಮಂತ್ರಿ ಜೊತೆ ಗೃಹಸಚಿವರು ಭಾನುವಾರ ಮಾತನಾಡಿದ್ದು, ವರದಿ ನೀಡುವಂತೆ ರಾಜ್ಯಕ್ಕೆ ಸೂಚಿಸುವ ಭರವಸೆ ನೀಡಿದ್ದಾರೆ’ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ. ಸುಖೇಂದು ಶೇಖರ್ ರಾಯ್, ಶಂತನು ಸೇನ್, ಕಲ್ಯಾಣ್ ಬ್ಯಾನರ್ಜಿ, ಡೆರೆಕ್ ಒಬ್ರಿಯಾನ್, ಮಾಲಾ ರಾಯ್ ಹಾಗೂ ಇತರ 11 ಸಂಸದರು ನಿಯೋಗದಲ್ಲಿ ಇದ್ದರು.

ಟಿಎಂಸಿ ನಿಯೋಗಕ್ಕೆ ಶಾ ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಗೃಹಸಚಿವಾಲಯದ ಎದುರು ಸೋಮವಾರ ಬೆಳಿಗ್ಗೆ ಧರಣಿ ನಡೆಸಿದ ನಿಯೋಗದ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನದ ವೇಳೆಗೆ ಶಾ ಅವರ ಭೇಟಿಗೆ ನಿಯೋಗಕ್ಕೆ ಅವಕಾಶ ಮಾಡಿಕೊಡಲಾಯಿತು.

ಟಿಎಂಸಿ ನಿಯೋಗವನ್ನು ಭೇಟಿ ಮಾಡಲು ಅವಕಾಶ ನೀಡದ ಗೃಹಸಚಿವ ಅಮಿತ್ ಶಾ ವಿರುದ್ಧ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ. ‘ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿ ನಿಯೋಗದ ಸದಸ್ಯರು ಪ್ರತಿಭಟನೆ ನಡೆಸಿದರೂ ಕೇಳುವವರಿಲ್ಲ‘ ಎಂದು ಅವರು ದೂರಿದ್ದಾರೆ.

ತ್ರಿಪುರಾದಲ್ಲಿ ಪ್ರಚಾರಕ್ಕೆ ತೆರಳಿದ್ದ ಟಿಎಂಸಿ ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಮಧ್ಯೆ, ಟಿಎಂಸಿ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಇದೇ 25ಕ್ಕೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದ್ದು, ಎರಡೂ ಪಕ್ಷಗಳ ನಡುವಣ ಜಟಾಪಟಿ ತೀವ್ರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.