ADVERTISEMENT

ಟಿಆರ್‌ಪಿ ಪ್ರಕರಣ: ಅರ್ನಬ್‌ ಬಂಧಿಸುವುದಾದರೆ, ಮೊದಲು ಸಮನ್ಸ್‌ ಕೊಡಿ

ಮುಂಬೈ ಪೊಲೀಸರಿಗೆ ಹೈಕೋರ್ಟ್ ಸೂಚನೆ

ಪಿಟಿಐ
Published 19 ಅಕ್ಟೋಬರ್ 2020, 12:06 IST
Last Updated 19 ಅಕ್ಟೋಬರ್ 2020, 12:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮುಖ್ಯಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವುದಾದರೆ, ಆ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಎಂಟು ವ್ಯಕ್ತಿಗಳಿಗೆ ನೀಡಿದಂತೆ, ಇವರಿಗೂ ಮೊದಲು ಸಮನ್ಸ್‌ ಜಾರಿಗೊಳಿಸಬೇಕು‘ ಎಂದು ಬಾಂಬೆ ಹೈಕೋರ್ಟ್‌ಮುಂಬೈ ಪೊಲೀಸರಿಗೆ ತಿಳಿಸಿದೆ.

ನ್ಯಾಯಮೂರ್ತಿ ಎಸ್‌.ಎಸ್‌.ಶಿಂಧೆ ಮತ್ತು ಎಂ.ಎಸ್‌.ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಸಮನ್ಸ್ ಜಾರಿಗೊಳಿಸಿದ ಮೇಲೆ ಗೋಸ್ವಾಮಿ ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು‘ ಎಂದೂ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿಯನ್ನು ನವೆಂಬರ್ 5ರೊಳಗೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ADVERTISEMENT

‘ಎಫ್‌ಐಆರ್ ಎಂಬುದು ವಿಶ್ವಕೋಶವಲ್ಲ. ನಾವು ಮೊದಲು ತನಿಖಾ ವರದಿಗಳನ್ನು ಪರಿಶೀಲಿಸಬೇಕು. ಇಲ್ಲಿಂದ ಮುಂದಿನ ವಿಚಾರಣೆವರೆಗೆ ಯಾವ ರೀತಿ ತನಿಖೆ ನಡೆದಿದೆ ಎಂದು ಗಮನಿಸಬೇಕಿದೆ‘ ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಾಲಯ, ಅ.6ರಂದು ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ರಿಪಬ್ಲಿಕ್ ಟಿವಿಯ ಮಾಲೀಕರಾದ ಆರ್‌ಜಿ ಔಟ್ಲಿಯರ್ ಮೀಡಿಯಾ ಪ್ರೈ. ಲಿ. ನವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದೆ.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಗೋಸ್ವಾಮಿ ಅವರನ್ನು ಬಂಧಿಸದಂತೆ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ‘ಪೊಲೀಸರು ಗೋಸ್ವಾಮಿ ಅವರನ್ನು ಗುರಿಯಾಗಿಸಿದ್ದಾರೆ, ಅವರನ್ನು ಬಂಧಿಸುವ ಶಂಕೆ ಇದೆ‘ ಎಂದು ಸಾಳ್ವೆ ಹೇಳಿದರು

ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ‘ಈ ಪ್ರಕರಣದಲ್ಲಿ ಗೋಸ್ವಾಮಿಯನ್ನು ಆರೋಪಿ ಎಂದು ಹೆಸರಿಸಿಲ್ಲ. ಹಾಗಾಗಿ ಅವರಿಗೆ ರಕ್ಷಣೆ ನೀಡುವ ಯಾವುದೇ ಆದೇಶದ ಅಗತ್ಯವೂ ಇಲ್ಲ‘ ಎಂದು ಹೇಳಿದರು.

‘ಟಿಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ ಮತ್ತು ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಯಾರನ್ನೂ ಬಂಧಿಸಲಾಗಿಲ್ಲ‘ ಎಂದು ಸಿಬಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.