ADVERTISEMENT

ಟಿಆರ್‌ಪಿ ತಿರುಚಲು ಅರ್ನಬ್ ಗೋಸ್ವಾಮಿ ಅವರಿಂದ 'ಲಕ್ಷಗಳ ಪಾವತಿ': ಪೊಲೀಸರ ಟಿಪ್ಪಣಿ

ಪಿಟಿಐ
Published 29 ಡಿಸೆಂಬರ್ 2020, 3:39 IST
Last Updated 29 ಡಿಸೆಂಬರ್ 2020, 3:39 IST
ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ
ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ    

ಮುಂಬೈ: ಸುದ್ದಿ ಮಾಧ್ಯಮ ರಿಪಬ್ಲಿಕ್ ಟಿವಿ ಮತ್ತು ಅದರ ಹಿಂದಿ ಅವತರಣಿಕೆಯ 'ಟೆಲಿವಿಷನ್ ರೇಟಿಂಗ್ ಪಾಯಿಂಟ್‌' (ಟಿಆರ್‌ಪಿ)ಅನ್ನು 'ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್'ನ (ಬಾರ್ಕ್‌) ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ತಿರುಚಿದ್ದಾರೆ ಎಂದು ಮುಂಬೈ ಪೊಲೀಸರು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಲ್ಲದೆ, ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರು ದಾಸ್‌ಗುಪ್ತಾಗೆ ಕಾಲಕಾಲಕ್ಕೆ "ಲಕ್ಷಗಳ ಮೊತ್ತದಲ್ಲಿ ಪಾವತಿ" ಮಾಡುತ್ತಿದ್ದರು ಎಂದು ಪೊಲೀಸರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಟಪ್ಪಣಿ ಸಲ್ಲಿಸಿದ್ದಾರೆ.

ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿರುವ 'ಬಾರ್ಕ್‌'ನ ಮತ್ತೊಬ್ಬ ಹಿರಿಯ ಅಧಿಕಾರಿ ಮತ್ತು ಅರ್ನಬ್‌ ಗೋಸ್ವಾಮಿ ಅವರೊಂದಿಗೆ ರಹಸ್ಯ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಾರ್ಥೊ ದಾಸ್‌ಗುಪ್ತಾ ಅವರನ್ನು ಬಂಧಿಸಲಾಗಿದೆ.

ADVERTISEMENT

ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಮುಂಬೈನ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿದ ವರದಿಯಲ್ಲಿ, ದಾಸ್‌ಗುಪ್ತಾ ಅವರನ್ನು ಟಿಆರ್‌ಪಿ ಹಗರಣದ 'ಮಾಸ್ಟರ್‌ ಮೈಂಡ್‌' ಎಂದು ಹೇಳಲಾಗಿದೆ. ಹೀಗಾಗಿ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಲಾಯಿತು.

'ದಾಸ್‌ಗುಪ್ತಾ ತಮ್ಮ ಸ್ಥಾನ ದುರುಪಯೋಗ ಮಾಡಿಕೊಂಡು 'ಎಆರ್‌ಜಿ ಔಟ್‌ಲೈರ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್'ನ 'ರಿಪಬ್ಲಿಕ್ ಭಾರತ್ ಹಿಂದಿ' ಮತ್ತು 'ರಿಪಬ್ಲಿಕ್ ಟಿವಿ ಇಂಗ್ಲಿಷ್‌' ಸೇರಿದಂತೆ ನಿರ್ದಿಷ್ಟ ಸುದ್ದಿ ವಾಹಿನಿಗಳ ಟಿಆರ್‌ಪಿ ತಿರುಚಿದ್ದಾರೆ. ದಾಸ್‌ಗುಪ್ತಾ ಬಾರ್ಕ್ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅರ್ನಾಬ್ ಗೋಸ್ವಾಮಿ ಮತ್ತು ಇತರರೊಂದಿಗೆ ಸೇರಿ ಈ ಸಂಚು ನಡೆಸಿದ್ದರು,' ಎಂದು ಪೊಲೀಸರು ತಮ್ಮ ಟಿಪ್ಪಣಿಯಲ್ಲಿ ಆರೋಪಿಸಿದ್ದಾರೆ.

ಇದಕ್ಕಾಗಿ ಅರ್ನಬ್‌ ಗೋಸ್ವಾಮಿ ಅವರು ದಾಸ್‌ಗುಪ್ತಾಗೆ ಕಾಲಕಾಲಕ್ಕೆ 'ಲಕ್ಷಗಳ ಮೊತ್ತದಲ್ಲಿ ವಾವತಿ' ಮಾಡುತ್ತಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

ಈ ಹಣದಿಂದ ದಾಸ್‌ಗುಪ್ತಾ ಆಭರಣಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸಿದ್ದರು. ಅವುಗಳನ್ನು ಅವರಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರ್ಥಿಕ ಲಾಭದ ಉದ್ದೇಶದಿಂದ ನಿರ್ದಿಷ್ಟ ಸುದ್ದಿ ವಾಹಿನಿಗಳ ಟಿಆರ್‌ಪಿಯನ್ನು ತಿರುಚಲು, ಬಾರ್ಕ್ ಮಾಜಿ ಸಿಒಒ ರೊಮಿಲ್ ರಾಮ್‌ಗಾರಿಯಾ ಕೂಡಾ ದಾಸ್‌ಗುಪ್ತಾ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ವಾದಿಸಿದ್ದಾರೆ.

ಪೊಲೀಸರ ಟಿಪ್ಪಣಿ ಪರಿಶೀಲಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ದಾಸ್‌ಗುಪ್ತಾ ಪೊಲೀಸ್ ಕಸ್ಟಡಿಯನ್ನು ಡಿಸೆಂಬರ್ 30 ರವರೆಗೆ ವಿಸ್ತರಿಸಿದರು. ದಾಸ್‌ಗುಪ್ತಾ ಕಳೆದ ವಾರ ಬಂಧನಕ್ಕೊಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.