ADVERTISEMENT

ಉತ್ತರ ಪ್ರದೇಶದಲ್ಲಿ ಕೆಸಿಆರ್ ಪೋಸ್ಟರ್ ಅಚ್ಚರಿ

ಪಿಟಿಐ
Published 19 ಮಾರ್ಚ್ 2022, 21:54 IST
Last Updated 19 ಮಾರ್ಚ್ 2022, 21:54 IST

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರನ್ನು ‘ದೇಶದ ನೇತಾರ’ ಎಂದು ಪ್ರಶಂಸಿಸುವ ಹಾಗೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ಶುಭಕೋರುವ ಹಲವು ಪೋಸ್ಟರ್‌ಗಳು ಉತ್ತರ ಪ್ರದೇಶದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ದಕ್ಷಿಣದ ರಾಜ್ಯದ ಮುಖ್ಯಮಂತ್ರಿಯೊಬ್ಬರ ಕುರಿತ ಪೋಸ್ಟರ್‌ಗಳನ್ನುದೇಶದ ಉತ್ತರ ಭಾಗದಲ್ಲಿ ಏಕೆ ಹಾಕಲಾಗಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಹಿಂದಿಭಾಷಿಕ ಪ್ರದೇಶದಲ್ಲಿ ಕೆಸಿಆರ್ ಅವರನ್ನು ಜನಪ್ರಿಯಗೊಳಿಸಲು ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಕರ್ತರೊಬ್ಬರು ಯತ್ನಿಸಿದ್ದಾರೆ. ಕೆಸಿಆರ್ ಅವರು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚನೆಗೆ ಯತ್ನಿಸುತ್ತಿದ್ದಾರೆ. ಕೆಸಿಆರ್ ಹಾಗೂ ಪ್ರಶಾಂತ್ ಕಿಶೋರ್ ನಡುವೆ ಒಡಂಬಂಡಿಕೆ ಏರ್ಪಡುವ ಸುಳಿವನ್ನು ಈ ಪೋಸ್ಟರ್‌ಗಳು ನೀಡಿವೆ. ತೆಲಂಗಾಣದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್, ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಹೇಮಂತ್ ಸೊರೇನ್, ಭಗವಂತ್ ಮಾನ್ ಅವರ ಜೊತೆಗೆ ಶರದ್ ಪವಾರ್, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಅವರ ಚಿತ್ರಗಳನ್ನೂ ಪೋಸ್ಟರ್‌ನಲ್ಲಿ ಹಾಕಲಾಗಿದೆ.

ADVERTISEMENT

‘ಬಿಜೆಪಿಯೇತರ ಪಕ್ಷಗಳ ಬೆಂಬಲದೊಂದಿಗೆ ಕೆಸಿಆರ್ ಅವರು ದೇಶದ ಚುಕ್ಕಾಣಿ ಹಿಡಿಯಲು ಸಮರ್ಥರಾಗಿದ್ದಾರೆ ಎಂಬುದನ್ನು ತಿಳಿಸಲು ಈ ಯತ್ನ ಮಾಡಿದ್ದೇನೆ’ ಎಂದು ಪೋಸ್ಟರ್ ಹಾಕಿರುವ ತೆಲಂಗಾಣ ಸಾಯಿ ಎಂಬ ಟಿಆರ್‌ಎಸ್ ಕಾರ್ಯಕರ್ತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.