ADVERTISEMENT

ಮೇಯರ್‌ ಗದ್ದುಗೆ ಹಿಡಿಯಲು ಟಿಆರ್‌ಎಸ್‌ಗೆ ಇತರರ ಬೆಂಬಲ ಅಗತ್ಯ

ಪಿಟಿಐ
Published 5 ಡಿಸೆಂಬರ್ 2020, 20:08 IST
Last Updated 5 ಡಿಸೆಂಬರ್ 2020, 20:08 IST
ಟಿಆರ್‌ಎಸ್‌
ಟಿಆರ್‌ಎಸ್‌   

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತದಲ್ಲಿರುವ ತೆಲಂಗಾಣ ರಾಷ್ಟ್ರ ಸಮಿತಿಯು(ಟಿಆರ್‌ಎಸ್‌) ಗ್ರೇಟರ್‌ ಹೈದರಾಬಾದ್‌ ಮಹಾನಗರಪಾಲಿಕೆಯ(ಜಿಎಚ್‌ಎಂಸಿ) ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮೇಯರ್‌ ಸ್ಥಾನವನ್ನು ಗೆಲ್ಲಲು ಇತರೆ ಪಕ್ಷಗಳ ಬೆಂಬಲ ಬೇಕಾಗಬಹುದು.

150 ವಾರ್ಡ್‌ಗಳ ಪೈಕಿ 149 ವಾರ್ಡ್‌ಗಳ ಫಲಿತಾಂಶವು ಶನಿವಾರ ಪ್ರಕಟವಾಗಿದೆ. ಕಾನೂನು ಸಮಸ್ಯೆಯಿಂದ ಒಂದು ವಾರ್ಡ್‌ನ ಮತದಾನ ಎಣಿಕೆ ಪ್ರಕ್ರಿಯೆಯನ್ನು ಸ್ಥಗತಗೊಳಿಸಲಾಗಿತ್ತು. 149 ವಾರ್ಡ್‌ಗಳ ಪೈಕಿ ಟಿಆರ್‌ಎಸ್‌ 55 ವಾರ್ಡ್‌ಗಳನ್ನು, ಬಿಜೆಪಿ 48 ಹಾಗೂ ಎಐಎಂಐಎಂ ಪಕ್ಷವು 44 ವಾರ್ಡ್‌ಗಳಲ್ಲಿ ಗೆದ್ದಿದೆ.

ನಗರದಲ್ಲಿ ಮತದಾನದ ಹಕ್ಕು ಇರುವ ಲೋಕಸಭೆ ಸಂಸದರು ಹಾಗೂ ಶಾಸಕರು ಜಿಎಚ್‌ಎಂಸಿ ಪದನಿಮಿತ್ತ ಸದಸ್ಯರಾಗಿದ್ದಾರೆ. ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡಲು ವಿಧಾನಪರಿಷತ್‌ ಸದಸ್ಯರು ಹಾಗೂ ರಾಜ್ಯ ಸಭೆ ಸದಸ್ಯರು ಜಿಎಚ್‌ಎಂಸಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಶನಿವಾರದವರೆಗೆ ಪದನಿಮಿತ್ತ ಸದಸ್ಯರ ಸಂಖ್ಯೆ 49 ಆಗಿದ್ದು, ಮೇಯರ್‌ ಚುನಾವಣೆಗೆ ಅಧಿಸೂಚನೆ ಪ್ರಕಟಿಸಿದ ನಂತರ ನಿಖರವಾದ ಸಂಖ್ಯೆ ಹೇಳಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

49 ಪದನಿಮಿತ್ತ ಸದಸ್ಯರ ಪೈಕಿ 31 ಸದಸ್ಯರು ಟಿಆರ್‌ಎಸ್‌ನವರಾಗಿದ್ದಾರೆ. ಪಕ್ಷವಾರು ಎಐಎಂಐಎಂನ 10, ಕಾಂಗ್ರೆಸ್‌ನ ಒಂದು ಹಾಗೂ ಬಿಜೆಪಿ ಮೂವರು ಸದಸ್ಯರಿದ್ದಾರೆ. ಆದರೆ, ಈ ಪದನಿಮಿತ್ತ ಸದಸ್ಯರು ಈ ಹಿಂದಿನ ಆರು ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿರಬಾರದು ಎನ್ನುವ ನಿಯಮವಿದೆ. ಕೆಲ ಸದಸ್ಯರು ಉಪನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ್ದು ಇವರು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಲ್ಲ’ ಎಂದು ಮೂಲಗಳು ತಿಳಿಸಿವೆ.

ವಿಶ್ಲೇಷಕರ ಪ್ರಕಾರ, ಮೇಯರ್‌ ಚುನಾವಣೆಯಲ್ಲಿ ಟಿಆರ್‌ಎಸ್‌ಗೆ 10 ಸದಸ್ಯರ ಕೊರತೆ ಉಂಟಾಗಬಹುದು ಹಾಗೂ ಇದನ್ನು ಸರಿದೂಗಿಸಲು ಎಐಎಂಐಎಂನ ಬೆಂಬಲ ಟಿಆರ್‌ಎಸ್‌ಗೆ ಬೇಕಾಗಬಹುದು. ಮೇಯರ್‌ ಗದ್ದುಗೆ ಹಿಡಿಯಲು ಟಿಆರ್‌ಎಸ್‌ಗೆ ಇರುವ ಆಯ್ಕೆ ಇದಾಗಿದೆ. ಎಐಎಂಐಎಂ ಜೊತೆ ಕೈಜೋಡಿಲು ಟಿಆರ್‌ಎಸ್‌ ತೀರಾ ಉತ್ಸುಕವಾಗಿಲ್ಲ. ಏಕೆಂದರೆ, ಪ್ರಚಾರದ ಸಂದರ್ಭದಲ್ಲಿ ಟಿಆರ್‌ಎಸ್‌ ಹಾಗೂ ಎಐಎಂಐಎಂನ ಅಪವಿತ್ರ ಮೈತ್ರಿಯ ಬಗ್ಗೆ ಬಿಜೆಪಿ ಆರೋಪಿಸಿತ್ತು. ಮೇಯರ್‌ ಚುನಾವಣೆಯಿಂದ ಎಐಎಂಐಎಂ ದೂರ ಉಳಿದರೂ, ಇದು ಟಿಆರ್‌ಎಸ್‌ಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.