ADVERTISEMENT

₹15 ಕೋಟಿ ಮೌಲ್ಯದ 14,400 ಮೊಬೈಲ್‌ ಕಳ್ಳತನ

ಮೊಬೈಲ್‌ ಸಾಗಿಸುತ್ತಿದ್ದ ಟ್ರಕ್‌ ತಡೆದು ಕೃತ್ಯ: ಮಧ್ಯಪ್ರದೇಶದ ‘ಕಂಜರ್‌ ಗ್ಯಾಂಗ್‌’ ಮೇಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 15:42 IST
Last Updated 22 ಅಕ್ಟೋಬರ್ 2020, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಚೀನಾ ಮೂಲದ ಮೊಬೈಲ್‌ ತಯಾರಿಕಾ ಕಂಪನಿ ಶಿಯೋಮಿಯ ₹15 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಟ್ರಕ್‌ ಅನ್ನು ತಮಿಳುನಾಡಿನ ಕೃಷ್ಣಗಿರಿ ಸಮೀಪ 10 ಜನರ ಕಳ್ಳರ ಗುಂಪೊಂದು ದೋಚಿದ್ದು, 14,400 ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದಾರೆ.

ಮಧ್ಯಪ್ರದೇಶದ ‘ಕಂಜರ್‌ ಗ್ಯಾಂಗ್‌’ ಈ ಕೃತ್ಯ ನಡೆಸಿರುವ ಶಂಕೆ ಇದ್ದು, ಕಳ್ಳರ ಬೆನ್ನತ್ತಿ 9 ಪೊಲೀಸರ ತಂಡವು ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ತೆರಳಿದೆ. ಬೆಂಗಳೂರಿನಿಂದ ಕೇವಲ 70 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಶ್ರೀಪೆರಂಬದೂರಿನಲ್ಲಿ ಇರುವ ಮೊಬೈಲ್‌ ತಯಾರಿಕಾ ಘಟಕದಿಂದಲೇ ಡಿಎಚ್‌ಎಲ್‌ ಕೊರಿಯರ್‌ ಕಂಪನಿಗೆ ಸೇರಿದ ಈ ಟ್ರಕ್‌ ಅನ್ನು ಕಳ್ಳರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೃಷ್ಣಗಿರಿ ಸಮೀಪ ಯಾರೂ ಇಲ್ಲದ ಪ್ರದೇಶದಲ್ಲಿ ಟ್ರಕ್‌ ತಡೆದು, ಎಲ್ಲ ಮೊಬೈಲ್‌ಗಳನ್ನು ದೋಚಿದ್ದಾರೆ. ಮೊಬೈಲ್‌ಗಳನ್ನು ಮುಂಬೈನಲ್ಲಿರುವ ಪ್ಯಾಕಿಂಗ್‌ ಘಟಕಕ್ಕೆ ಟ್ರಕ್‌ ಮೂಲಕ ಕೊಂಡೊಯ್ಯಲಾಗುತ್ತಿತ್ತು.

ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಹಳ್ಳಿಯ ಸಮೀಪ ಚೆನ್ನೈ–ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಈ ಕೃತ್ಯ ನಡೆದಿದೆ. ‘ಟ್ರಕ್‌ ತಡೆದ ಕಳ್ಳರ ಗುಂಪು, ಚಾಲಕ ಹಾಗೂ ಜೊತೆಗಿದ್ದ ವ್ಯಕ್ತಿಯನ್ನು ಬೆದರಿಸಿ, ಟ್ರಕ್‌ ಅನ್ನು 8–10 ಕಿ.ಮೀ ಚಲಾಯಿಸಿಕೊಂಡು ಬಂದು, ಎಲ್ಲ ಮೊಬೈಲ್‌ಗಳನ್ನು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಗಂಗಾಧರ್‌ ತಿಳಿಸಿದರು.

ADVERTISEMENT

‘ಮುಂದಿನ ಎರಡು ದಿನದೊಳಗಾಗಿ ಈ ಗುಂಪನ್ನು ಬಂಧಿಸಲಿದ್ದೇವೆ. ಮಧ್ಯಪ್ರದೇಶದ ಕಂಜರ್‌ ಗ್ಯಾಂಗ್‌ ಮೇಲೆ ಸಂಶಯವಿದೆ. ಈ ಗ್ಯಾಂಗ್‌ ದೋಚುವ ಮಾದರಿಯಲ್ಲೇ ಈ ಕೃತ್ಯ ನಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.