ADVERTISEMENT

ಜಾರ್ಜಿಯಾದಲ್ಲಿನ ಬೈಡನ್‌ ಗೆಲುವು ತಿರುಚಲು ಟ್ರಂಪ್‌ ಯತ್ನ: ಚುನಾವಣಾಧಿಕಾರಿಗೆ ಕರೆ

ಚುನಾವಣಾಧಿಕಾರಿಗೆ ಕರೆ ಮಾಡಿ ಅಗತ್ಯ ಮತಗಳನ್ನು ಹುಡುಕಲು ಆಗ್ರಹ

ಪಿಟಿಐ
Published 4 ಜನವರಿ 2021, 11:15 IST
Last Updated 4 ಜನವರಿ 2021, 11:15 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಜಾರ್ಜಿಯಾದಲ್ಲಿ ಜೋ ಬೈಡನ್‌ ಅವರ ಗೆಲುವನ್ನು ತಿರುಚಲು ಅಲ್ಲಿನ ಚುನಾವಣಾ ಮುಖ್ಯಸ್ಥರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕರೆ ಮಾಡಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಫಲಿತಾಂಶ ಬಂದಾಗಿನಿಂದಲೂ ಬೈಡನ್‌ ಮುಂದೆ ಸೋಲೊಪ್ಪಿಕೊಳ್ಳಲು ಟ್ರಂಪ್‌ ನಿರಾಕರಿಸಿದ್ದಾರೆ. ಟ್ರಂಪ್‌ ಪರವಾಗಿರುವ ಹಲವರು ಹಾಗೂ ಟ್ರಂಪ್‌ ಅಭಿಯಾನವು, ಹಲವು ಪ್ರಮುಖ ರಾಜ್ಯಗಳಲ್ಲಿನ ಫಲಿತಾಂಶವನ್ನು ಪ್ರಶ್ನಿಸುವ ಪ್ರಯತ್ನ ಮಾಡಿದ್ದರು. ಟೆಕ್ಸಾಸ್‌ನ ಅಟಾರ್ನಿ ಜನರಲ್‌ ಕೆನ್‌ ಪ್ಯಾಕ್ಸ್ಟನ್‌ ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತಗೊಂಡಿತ್ತು.

ಶನಿವಾರ ತಮ್ಮದೇ ರಿಪಬ್ಲಿಕನ್‌ ಪಕ್ಷದ ಬ್ರ್ಯಾಡ್‌ ಫೆನ್ಸ್‌ಪರ್ಜರ್‌ ಅವರಿಗೆ ಕರೆ ಮಾಡಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆಯನ್ನು ಟ್ರಂಪ್‌ ನಡೆಸಿದ್ದು, ಈ ವೇಳೆ ನ.3ರಂದು ನಡೆದ ಚುನಾವಣೆಯಲ್ಲಿ ತನಗಾದ ಸೋಲನ್ನು ಗೆಲುವಾಗಿ ಪರಿವರ್ತಿಸಲು ಬೇಕಾಗಿರುವ ಅಗತ್ಯ ಮತಗಳನ್ನು ಹುಡುಕಲು ಆಗ್ರಹಿಸಿದ್ದಾರೆ. ಈ ಕರೆಯನ್ನು ರಹಸ್ಯವಾಗಿ ರೆಕಾರ್ಡ್‌ ಮಾಡಲಾಗಿದ್ದು, ಅಮೆರಿಕದ ಖ್ಯಾತ ಮಾಧ್ಯಮವೊಂದು ಇದನ್ನು ಪೋಸ್ಟ್‌ ಮಾಡಿದೆ. ಈ ಬೆಳವಣಿಗೆಯನ್ನು ‘ಅಧಿಕಾರದ ದುರ್ಬಳಕೆ ಹಾಗೂ ಸಂಭಾವ್ಯ ಅಪರಾಧ ಕೃತ್ಯ’ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

‘ಜಾರ್ಜಿಯಾ ಜನರು ಆಕ್ರೋಶಗೊಂಡಿದ್ದಾರೆ. ದೇಶದ ಜನರೂ ಆಕ್ರೋಶದಲ್ಲಿದ್ದಾರೆ. ಮತಗಳನ್ನು ಮತ್ತೆ ಎಣಿಕೆ ಮಾಡಿದ್ದೀರಿ ಎಂದು ಹೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. ನನಗೆ ಬೇಕಾಗಿರುವುದು ಇಷ್ಟೇ. 11,780 ಮತಗಳನ್ನು ಹುಡುಕಿ. ಏಕೆಂದರೆ ನಾವು ಈ ರಾಜ್ಯವನ್ನು ಗೆದ್ದಿದ್ದೇವೆ’ ಎಂದು ಕರೆಯಲ್ಲಿ ಟ್ರಂಪ್‌ ಹೇಳಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ಜಾರ್ಜಿಯಾದಲ್ಲಿ ಟ್ರಂಪ್‌ 11,779 ಮತಗಳಿಂದ ಸೋತಿದ್ದರು.

ಕರೆಯುದ್ದಕ್ಕೂ ಬ್ರ್ಯಾಡ್‌ ಹಾಗೂ ಅವರ ಕಚೇರಿಯ ಜನರಲ್‌ ಕೌನ್ಸೆಲ್‌ ಅವರು ಟ್ರಂಪ್‌ ಅವರ ಪ್ರತಿಪಾದನೆಯನ್ನು ನಿರಾಕರಿಸಿದ್ದು, ಜಾರ್ಜಿಯಾದಲ್ಲಿ 11,779 ಮತಗಳಿಂದ ಜೋ ಬೈಡನ್‌ ಗೆಲುವು ನಿಖರವಾಗಿದೆ ಹಾಗೂ ನ್ಯಾಯೋಚಿತವಾಗಿದೆ ಎಂದು ವಿವರಿಸಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಉಲ್ಲೇಖಿಸಿದೆ.

‘ನಿಮ್ಮಲ್ಲಿರುವ ದತ್ತಾಂಶ ಸರಿಯಾಗಿಲ್ಲ’ ಎಂದು ಬ್ರ್ಯಾಡ್‌ ತಿಳಿಸಿದ ಸಂದರ್ಭದಲ್ಲಿ, ‘ಜಾರ್ಜಿಯಾದಲ್ಲಿ ತಾನು ಸೋಲಲು ಸಾಧ್ಯವೇ ಇಲ್ಲ’ ಎಂದು ಟ್ರಂಪ್‌ ಮತ್ತೆ ಪ್ರತಿಪಾದಿಸಿದ್ದಾರೆ.

ಟ್ರಂಪ್‌ ಅವರ ಈ ಕರೆಯ ಕುರಿತು ಪ್ರಕಟಣೆ ಮೂಲಕ ಟೀಕಿಸಿರುವ ಡೆಮಾಕ್ರಟಿಕ್‌ ಸೆನೆಟರ್‌ ಡಿಕ್‌ ಡರ್ಬಿನ್‌, ‘ಕಾನೂನಾತ್ಮಕವಾಗಿ ಖಚಿತಗೊಂಡ ಮತಗಳನ್ನು ತಿರುಚಲು ಅಧಿಕಾರಿಯೊಬ್ಬರಿಗೆ ಬೆದರಿಸುವ ಅವರ ನಾಚಿಕೆಗೇಡಿನ ಪ್ರಯತ್ನವು, ಪ್ರಜಾಪ್ರಭುತ್ವದ ಮೇಲಿನ ದಾಳಿ. ಅಧ್ಯಕ್ಷರ ಈ ನಡೆ ಅಪಾಯಕಾರಿ. ಇವರ ಈ ನಡೆಯನ್ನು ಬೆಂಬಲಿಸುವವರು ಹಾಗೂ ಪ್ರೋತ್ಸಾಹಿಸುವವರು, ಶಾಂತಿಯುತವಾದ ಅಧಿಕಾರ ಹಸ್ತಾಂತರಕ್ಕೆ ಅಪಾಯ ತರುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘2020ರ ಚುನಾವಣೆ ಫಲಿತಾಂಶವನ್ನು ತಿರುಚುವ ನಿಷ್ಪ್ರಯೋಜಕ ಪ್ರಯತ್ನವನ್ನು ಟ್ರಂಪ್‌ ಮುಂದುವರಿಸಿದ್ದಾರೆ ಎನ್ನುವುದಕ್ಕೆ ಈ ಕರೆಯು ಸಾಕ್ಷಿ. ಈ ವೇಳೆ, ಬ್ರ್ಯಾಡ್‌ ಅವರಿಗೇ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಗೆ ಜಗ್ಗದೇ ಇದ್ದ ಬ್ರ್ಯಾಡ್‌ ಅವರನ್ನು ನಾನು ಅಭಿನಂದಿಸುತ್ತೇನೆ. ಈ ರೀತಿ ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಕಾನೂನು ಬಾಹಿರ’ ಎಂದು ಸೆನೆಟರ್‌ ಡಯಾನ್‌ ಫೈನ್‌ಸ್ಟೈನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.