ADVERTISEMENT

ಮೋದಿ ಜತೆ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಅಂತಿಮ ಎಂದ ಟ್ರಂಪ್

ಪಿಟಿಐ
Published 2 ಫೆಬ್ರುವರಿ 2026, 23:30 IST
Last Updated 2 ಫೆಬ್ರುವರಿ 2026, 23:30 IST
<div class="paragraphs"><p>ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್</p></div>

ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್

   

(ಪಿಟಿಐ ಚಿತ್ರ)

ನವದೆಹಲಿ/ ವಾಷಿಂಗ್ಟನ್: ‘ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಘೋಷಿಸಿದ್ದಾರೆ.

ADVERTISEMENT

‘ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕವು ಪ್ರತಿಸುಂಕವನ್ನು ಪ್ರಸ್ತುತ ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ’ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ‘ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಶೂನ್ಯ ಸುಂಕ ವಿಧಿಸಲಿದೆ’ ಎಂದೂ ಹೇಳಿಕೊಂಡಿದ್ದಾರೆ. 

ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾದ ನಂತರದಲ್ಲಿ, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದಾರೆ. ಈ ಪೈಕಿ ಶೇ 25ರಷ್ಟು ‘ಪ್ರತಿಸುಂಕ’ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿದೆ. 

‘ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಹಾಗೂ ಅಮೆರಿಕದ ಸರಕುಗಳಿಗೆ ಶೂನ್ಯ ಸುಂಕ ವಿಧಿಸಿದರೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ 50ರಿಂದ ಶೇ 18ಕ್ಕೆ ಇಳಿಸಲಾಗುವುದು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ಸೋಮವಾರ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದು, ಅದರ ಬೆನ್ನಲ್ಲೇ ಈ ಮಹತ್ವದ ಘೋಷಣೆ ಮಾಡಿದ್ದಾರೆ.

‘ಪ್ರಧಾನಿ ಮೋದಿ ಅವರೊಂದಿಗಿನ ಸ್ನೇಹ ಮತ್ತು ಗೌರವದಿಂದ ಹಾಗೂ ಅವರ ಕೋರಿಕೆಯಂತೆ, ತಕ್ಷಣವೇ ಜಾರಿಗೆ ಬರುವಂತೆ ನಾನು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸಿದ್ದೇನೆ’ ಎಂದು ಹೇಳಿದ್ದಾರೆ. 

ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದು, ‘ಭಾರತದಲ್ಲಿ ತಯಾರಾದ ಉತ್ಪನ್ನಗಳಿಗೆ ಅಮೆರಿಕ ವಿಧಿಸುತ್ತಿದ್ದ ತೆರಿಗೆ ಈಗ ಶೇ 18ಕ್ಕೆ ಇಳಿಕೆಯಾಗಿರುವುದು ಸಂತಸ ಉಂಟುಮಾಡಿದೆ’ ಎಂದು ಹೇಳಿದ್ದಾರೆ.

‘ಈ ಮಹತ್ವದ ಘೋಷಣೆಗಾಗಿ ದೇಶದ 140 ಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ. ಆದರೆ ಪ್ರಧಾನಿ ಅವರು ತಮ್ಮ ಪೋಸ್ಟ್‌ನಲ್ಲಿ ವ್ಯಾಪಾರ ಒಪ್ಪಂದದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಅವರು ವಾಷಿಂಗ್ಟನ್‌ಗೆ ಮೂರು ದಿನಗಳ ಭೇಟಿಯನ್ನು ಪ್ರಾರಂಭಿಸಿದ ದಿನದಂದೇ ಈ ಬೆಳವಣಿಗೆ ನಡೆದಿದೆ.

ಪ್ರಧಾನಿ ಶರಣಾಗಿದ್ದಾರೆ: ಕಾಂಗ್ರೆಸ್
‘ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ’ ಎಂದು ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ‘ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿ ಮೇಲೆ ಸ್ವಲ್ಪ ಹತೋಟಿ ಹೊಂದಿರುವಂತೆ ತೋರುತ್ತಿದೆ. ಮೋದಿ ಅವರು ಅಂತಿಮವಾಗಿ ಶರಣಾಗಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ‘ಭಾರತದ ಜನರು ತಮ್ಮ ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಅಮೆರಿಕದ ಅಧ್ಯಕ್ಷರು ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿಗಳಿಂದ ಮಾತ್ರ ತಿಳಿದುಕೊ ಳ್ಳುತ್ತಿದ್ದಾರೆ. ಇದು ಆತ್ಮನಿರ್ಭರ ಅಲ್ಲ, ಟ್ರಂಪ್‌–ನಿರ್ಭರ’ ಎಂದು ವ್ಯಂಗ್ಯವಾಡಿದ್ದಾರೆ.
ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಶಾಂತಿ ಸ್ಥಾಪನೆಗಾಗಿ ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ
– ನರೇಂದ್ರ ಮೋದಿ, ಪ್ರಧಾನಿ
ಭಾರತದ ಪ್ರಧಾನಿ ಮೋದಿಯವ ರೊಂದಿಗೆ ಮಾತನಾಡಿದೆ. ಅವರು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರ ದೇಶದ ಪ್ರಬಲ ಮತ್ತು ಗೌರವಾನ್ವಿತ ನಾಯಕ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ
‘ಹೆಚ್ಚು ಖರೀದಿ: ಮೋದಿ ಬದ್ಧ’
‘ಅಮೆರಿಕದಿಂದ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮೋದಿ ಅವರು ಬದ್ಧರಾಗಿದ್ದಾರೆ’ ಎಂದು ಟ್ರಂಪ್‌ ಹೇಳಿದ್ದಾರೆ. ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನ, ಕಲ್ಲಿದ್ದಲು ಮತ್ತು ಇತರ ಹಲವು ಉತ್ಪನ್ನಗಳ ಖರೀದಿಯನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.