ADVERTISEMENT

ಪಾಕಿಸ್ತಾನ–ಭಾರತ ನಡುವಿನ ಯುದ್ಧ ನಿಲ್ಲಿಸಿದ್ದು ಟ್ರಂಪ್‌: ಪಾಕ್‌ ಪ್ರಧಾನಿ ಷರೀಫ್‌

ಪಿಟಿಐ
Published 26 ಸೆಪ್ಟೆಂಬರ್ 2025, 16:00 IST
Last Updated 26 ಸೆಪ್ಟೆಂಬರ್ 2025, 16:00 IST
ಶ್ವೇತ ಭವನದಲ್ಲಿ ಶುಕ್ರವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಅವರೊಂದಿಗೆ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದರು.
ಶ್ವೇತ ಭವನದಲ್ಲಿ ಶುಕ್ರವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಅವರೊಂದಿಗೆ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದರು.   

ನ್ಯೂಯಾರ್ಕ್‌/ನವದೆಹಲಿ/ಇಸ್ಲಾಮಾಬಾದ್‌:  ‘ಪಾಕಿಸ್ತಾನ–ಭಾರತ ನಡುವಿನ ಕದನ ವಿರಾಮಕ್ಕೆ ಕಾರಣವಾದ ಟ್ರಂಪ್ ಅವರದ್ದು ದಿಟ್ಟ, ಧೈರ್ಯಶಾಲಿ ಮತ್ತು ನಿರ್ಣಾಯಕ ನಾಯಕತ್ವ’ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹೊಗಳಿದ್ದಾರೆ’ ಎಂದು ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಪ್ರವಾಸ ಕೈಗೊಂಡಿದ್ದ ಶೆಹಬಾಜ್‌ ಷರೀಫ್‌ ಅವರು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಅವರೊಂದಿಗೆ ಟ್ರಂಪ್‌ ಅವರನ್ನು ಭೇಟಿಮಾಡಿದ್ದರು. ತಮ್ಮ ಅಧಿಕೃತ ನಿವಾಸದಲ್ಲಿ ಟ್ರಂಪ್‌ ಅವರು ಶೆಹಬಾಜ್‌ ಮತ್ತು ಮುನೀರ್‌ ಅವರಿಗೆ ಆತಿಥ್ಯ ನೀಡಿದ್ದರು.

ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ಉಗ್ರ ದಾಳಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥರ ಪ್ರಚೋದನೆಯೇ ಕಾರಣ ಎಂದು ಭಾರತ ಆರೋಪಿಸಿದ ನಂತರವೂ ಜೂನ್‌ 18ರಂದು ಟ್ರಂಪ್‌ ಅವರು ಪಾಕ್ ಸೇನಾ ಮುಖ್ಯಸ್ಥ ಮುನೀರ್‌ ಅವರಿಗೆ ವಾಷಿಂಗ್ಟನ್‌ ಡಿಸಿಯ ತಮ್ಮ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಿದ್ದರು.

ADVERTISEMENT

ಪಾಕ್ ಪ್ರಧಾನಿ ಹೊಗಳಿದ ಟ್ರಂಪ್:

ಶುಕ್ರವಾರ ನಡೆದ ಭೇಟಿ ವೇಳೆ ಷರೀಫ್‌ ಅವರನ್ನು ‘ಮಹಾನ್‌ ನಾಯಕ’ ಮತ್ತು ಮುನೀರ್ ಅವರನ್ನು ‘ಮಹಾನ್ ವ್ಯಕ್ತಿ’ ಎಂದು ಟ್ರಂಪ್‌ ಮೆಚ್ಚಿಕೊಂಡಿದ್ದಾರೆ.

ಹಲವು ಕಾರ್ಯನಿರ್ವಾಹಕ ಆದೇಶಗಳಿಗೆ ಗುರುವಾರ ಸಹಿ ಹಾಕಿದ ಬಳಿಕ ಓವಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ, ‘ನನ್ನ ಭೇಟಿಗಾಗಿ ಶ್ರೇಷ್ಠ ನಾಯಕರು ಬರುತ್ತಿದ್ದಾರೆ’ ಎಂದು ಟ್ರಂಪ್‌ ಹೇಳಿದ್ದರು.

‘ಕದನ ವಿರಾಮಕ್ಕೆ ನಾನೇ ಕಾರಣ’
ಭಾರತ–ಪಾಕಿಸ್ತಾನ ಮಧ್ಯೆ ಕದನ ವಿರಾಮ ಮಧ್ಯಸ್ಥಿಕೆ ವಹಿಸಿದ್ದು ನಾನೇ ಎಂದು ಟ್ರಂಪ್‌ ಪದೇಪದೇ ಹೇಳುತ್ತಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣದಲ್ಲಿ ಟ್ರಂಪ್‌ ಇದೇ ವಿಚಾರ ಪುನರುಚ್ಚರಿಸಿದ್ದಾರೆ.  ಮೂರನೇಯವರ ಮಧ್ಯಸ್ಥಿಕೆ ಇರಲಿಲ್ಲ ಎಂದು ಪ್ರಧಾನಿ ಮೋದಿಯವರೇ ಸ್ಪಷ್ಟಪಡಿಸಿದ್ದರೂ ‘ನಾನು ನಿಲ್ಲಿಸಿದ ಏಳು ಯುದ್ಧಗಳಲ್ಲಿ ಭಾರತ–ಪಾಕಿಸ್ತಾನ ನಡುವಿನ ಸಂಘರ್ಷವೂ ಒಂದು ಎಂದು ಟ್ರಂಪ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.