ADVERTISEMENT

ಕೋವಿಡ್‌ ಮಹಾಮಾರಿಗೆ ಇನ್ನಷ್ಟು ಮಂದಿ ಬಲಿ: ಅಮೆರಿಕದಲ್ಲಿ ತುರ್ತು ಪರಿಸ್ಥಿತಿ

ಪಿಟಿಐ
Published 14 ಮಾರ್ಚ್ 2020, 21:31 IST
Last Updated 14 ಮಾರ್ಚ್ 2020, 21:31 IST
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್    

ವಾಷಿಂಗ್ಟನ್: ಅಮೆರಿಕದಲ್ಲಿಕೋವಿಡ್‌ಗೆ ಇನ್ನಷ್ಟು ಮಂದಿ ಬಲಿಯಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಕೊರೊನಾ ಮಹಾಮಾರಿಯನ್ನು ಎದುರಿಸಲು ಫೆಡರಲ್ ನಿಧಿಯಲ್ಲಿ ₹ 3.65 ಲಕ್ಷ ಕೋಟಿ (50 ಬಿಲಿಯನ್ ಡಾಲರ್) ಮೀಸಲಿಡುವುದಾಗಿ ಶ್ವೇತಭವನದಲ್ಲಿ ನಡೆದಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.

ಜಾಗತಿಕವಾಗಿ 5 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಈ ಕೊರೊನಾ ಸೋಂಕು ಅಮೆರಿಕದ 46 ರಾಜ್ಯಗಳಿಗೂ ಹರಡಿದ್ದು, 2 ಸಾವಿರ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ಅಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಕೇಂದ್ರಗಳನ್ನು ಆರಂಭಿಸಿದ್ದು, ಆರೋಗ್ಯ ಇಲಾಖೆ ಸನ್ನದ್ಧವಾಗಿರುವಂತೆ ಆದೇಶಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ADVERTISEMENT

*ಇರಾನ್‌ನಲ್ಲಿ ಶನಿವಾರ 97 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

*ಗ್ರೀಕ್‌ನಲ್ಲಿ ಸೋಂಕು ತಗುಲಿದ್ದ ಇಬ್ಬರು ಶನಿವಾರ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೇರಿದೆ.

*ಎಲ್ಲಾ ದೇಶಗಳಿಂದ ಬರುವವರಿಗೆ ಪ್ರವಾಸಿ ವೀಸಾ ನೀಡುವುದನ್ನು ನೇಪಾಳವು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಇದರಿಂದ ಅಂದಾಜು 20 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಅವಧಿಯ ಎಲ್ಲಾ ಪರ್ವತಾರೋಹಣ ಯಾತ್ರೆಗಳನ್ನು ರದ್ದು ಮಾಡಲಾಗಿದೆ.

*ವಿದೇಶಿಯರು ಬರುವುದನ್ನು ತಡೆಯುವ ಸಲುವಾಗಿ ನಾರ್ವೆ ಮತ್ತು ಪೋಲೆಂಡ್‌ ದೇಶಗಳೊಂದಿಗಿನ ಗಡಿಗಳನ್ನು ಮುಚ್ಚುವುದಾಗಿ ರಷ್ಯಾದ ಪ್ರಧಾನಿ ಮಿಖಾಯಿಲ್‌ ಮಿಶುಸ್ಟಿನ್‌ ತಿಳಿಸಿದ್ದಾರೆ.

*ಸೋಂಕಿನ ಭೀತಿಯ ಕಾರಣ ಜೆಕ್‌ ರಿಪಬ್ಲಿಕ್‌ನಲ್ಲಿ ಅಂಗಡಿ, ರೆಸ್ಟೋರೆಂಟ್‌ ಮತ್ತು ಪಬ್‌ಗಳನ್ನು ಮುಚ್ಚಲು ಸರ್ಕಾರ ಆದೇಶ ನೀಡಿದೆ.

*ಕೊರೊನಾ ಸೋಂಕಿನಮೊದಲ ಎರಡು ಪ್ರಕರಣಗಳುವೆನಿಜುವೆಲಾದಲ್ಲಿ ದೃಢಪಟ್ಟಿವೆ.

*ಇಟಲಿಯಲ್ಲಿ ಸಾರ್ವಜನಿಕ ಆಟದ ಮೈದಾನಗಳನ್ನು ಮತ್ತು ಉದ್ಯಾನಗಳನ್ನು ಮುಚ್ಚಲಾಗಿದೆ.

*ವೆನಿಜುವೆಲಾದೊಂದಿಗಿನ ಗಡಿಯನ್ನು ಮುಚ್ಚುವಂತೆ ಕೊಲಂಬಿಯಾ ಅಧ್ಯಕ್ಷ ಐವನ್‌ ಡುಕ್‌ ಆದೇಶಿಸಿದ್ದಾರೆ.

*ರುವಾಂಡದಲ್ಲಿ ಭಾರತ ಸಂಜಾತ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪೂರ್ವ ಆಫ್ರಿಕಾ ದೇಶದಲ್ಲಿ ಸೋಂಕು ದೃಢಪಟ್ಟಿರುವ ಮೊದಲ ಪ್ರಕರಣ ಇದಾಗಿದೆ. ಸೋಂಕಿತ ವ್ಯಕ್ತಿ ಮುಂಬೈನಿಂದ ರುವಾಂಡಕ್ಕೆ ಬಂದಿದ್ದರು ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

*ಸ್ಪೇನ್‌ನಲ್ಲಿ ಒಂದೇ ದಿನದಲ್ಲಿ 1,500 ಹೊಸ ಪ್ರಕರಣಗಳು ಪತ್ತೆಯಾಗಿವೆ. 5,700ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ಈವರೆಗೆ ಪತ್ತೆಯಾಗಿವೆ.

*ಸೋಂಕಿನ ಭೀತಿಯಿಂದ ವಿಶ್ವದಾದ್ಯಂತ ಇರುವ ತನ್ನ ದೇವಾಲಯಗಳನ್ನು ಮುಚ್ಚುವುದಾಗಿ ಅಮೆರಿಕದ ಸ್ವಾಮಿನಾರಾಯಣ ಪಂಥ ಘೋಷಿಸಿದೆ.

ನವಜಾತ ಶಿಶುವಿಗೂ ಸೋಂಕು
ಲಂಡನ್‌ನಲ್ಲಿ ನವಜಾತ ಶಿಶುವೊಂದಕ್ಕೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ನ್ಯೂಮೋನಿಯಾ ಶಂಕೆಯಿಂದ ಗರ್ಭಿಣಿಯೊಬ್ಬರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೆರಿಗೆಯಾದ ಬಳಿಕ ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ನವಜಾತ ಶಿಶುವನ್ನೂ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಅದಕ್ಕೂ ಸೋಂಕು ತಗುಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ: ಮತ್ತೆ 13 ಮಂದಿ ಬಲಿ
ಬೀಜಿಂಗ್‌:
ಕೋವಿಡ್‌–19 ಸೋಂಕಿಗೆ ಚೀನಾದಲ್ಲಿ ಮತ್ತೆ 13 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 3,189ಕ್ಕೇರಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮತ್ತೆ 11 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 80,824ಕ್ಕೆ ಏರಿಕೆಯಾಗಿದೆ.

ಮೃತಪಟ್ಟಿರುವ 13 ಮಂದಿ ಮತ್ತು 11 ಮಂದಿ ಸೋಂಕಿತರು ಚೀನಾದ ಮೇನ್‌ಲ್ಯಾಂಡ್‌ನವರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.