
ನವದೆಹಲಿ: ವಿದ್ಯಾರ್ಥಿಗಳು ತಂತ್ರಜ್ಞಾನದ ಗುಲಾಮರಾಗಬಾರದು ಬದಲಾಗಿ ಅದರ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.
‘ಪರೀಕ್ಷಾ ಪೇ ಚರ್ಚಾ’ದ ಎರಡನೇ ಕಂತಿನ ಅಂಗವಾಗಿ ಕೊಯಮತ್ತೂರು, ರಾಯಪುರ, ಗುವಾಹಟಿ ಮತ್ತು ಗುಜರಾತ್‌ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಮೊಬೈಲ್ ಫೋನ್‌ಗಳು ಕೆಲ ಮಕ್ಕಳ ಸರ್ವಸ್ವವೇ ಆಗಿದೆ. ಅವರು ಮೊಬೈಲ್ ಅಥವಾ ಟಿ.ವಿ ಇಲ್ಲದೇ ಊಟವೇ ಮಾಡುವುದಿಲ್ಲ. ಅದರರ್ಥ ನೀವು ಅದರ ಗುಲಾಮರಾಗಿದ್ದೀರಿ’ ಎಂದು ತಿಳಿಸಿದರು.
‘ಕೃತಕ ಬುದ್ಧಿ ಮತ್ತೆ(ಎ.ಐ)ಯಂಥ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳು ಭಯಪಡಬೇಕಾಗಿಲ್ಲ. ಬದಲಾಗಿ ಅದನ್ನು ತಮ್ಮ ಕೌಶಲಾಭಿವೃದ್ಧಿಗೆ ಮತ್ತು ಸಾಮರ್ಥ್ಯ ವೃದ್ಧಿಗೆ ಬಳಸಿಕೊಳ್ಳಬೇಕು’ ಎಂದರು.
‘ಹಿಂದಿನ ಪ್ರಶ್ನೆ ಪತ್ರಿಕೆಗಳ ಮೂಲಕ ಅಭ್ಯಾಸ ನಡೆಸಿ. ಉತ್ತಮ ನಿದ್ದೆಯಿಂದ ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕ ಗಳಿಸಲು ಸಾಧ್ಯ. ಪರೀಕ್ಷೆ ತಯಾರಿ ನಡೆಸಿದ ಬಳಿಕ ಭಯಪಡಬೇಡಿ. ಉತ್ತಮ ನಿದ್ದೆಯಿಂದ ಮರುದಿನ ನಿಮ್ಮಲ್ಲಿ ಉತ್ಸಾಹ ತುಂಬಿರುತ್ತದೆ’ ಎಂದು ಹೇಳಿದರು.
‘10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವಿಕಸಿತ ಭಾರತ–2047ರ ಕನಸನ್ನು ಹೊತ್ತಿರುವುದನ್ನು ಕಂಡು ನನಗೆ ಖುಷಿ ಎನಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳ ಅಭ್ಯಾಸಗಳನ್ನು ನಾವು ಅಳವಡಿಸಿಕೊಳ್ಳಬೇಕು. ಸಿಗ್ನಲ್‌ನಲ್ಲಿ ಕೆಂಪು ದೀಪವಿರುವಾಗ ವಾಹನದ ಎಂಜಿನ್ ಸ್ಥಗಿತಗೊಳಿಸಬೇಕು. ಆಹಾರವನ್ನು ಪೋಲು ಮಾಡಬಾರದು ಮತ್ತು ಪೋಲು ಮಾಡುವುದನ್ನು ಕಡಿಮೆಗೊಳಿಸಬೇಕು. ನಮ್ಮ ಜೀವನದಲ್ಲಿ ಶಿಸ್ತು ಅತಿ ಮುಖ್ಯ’ ಎಂದು ಹೇಳಿದರು.
‘ನೀವು ಸಾಧಕರಲ್ಲಿ ಕೇಳಿ, ಅವರ ತಂದೆ–ತಾಯಿ ಮತ್ತು ಪೋಷಕರು ಅವರ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ನಾಯಕನಾಗಬೇಕೆಂದರೆ ಮುಂದಾಳತ್ವ ವಹಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾಯಕತ್ವ ಎಂದರೆ ಕೇವಲ ಚುನಾವಣೆಯಲ್ಲಿ ಸ್ಫರ್ಧಿಸುವುದು ಅಲ್ಲ. ತಮ್ಮ ಯೋಚನೆಗಳನ್ನು ಕನಿಷ್ಠ 10 ಜನರಿಗಾದರೂ ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವ ಸಾಮರ್ಥ್ಯವು ನಾಯಕತ್ವದ ಪ್ರಮುಖ ಲಕ್ಷಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.