ADVERTISEMENT

Tirupati Laddu | ‘ತಿರುಪತಿ ಲಡ್ಡು’ ಅನಧಿಕೃತ ಮಾರಾಟಕ್ಕೆ ಕಡಿವಾಣ

ಆನ್‌ಲೈನ್‌ ಸಂಸ್ಥೆಗಳು ಹಾಗೂ ಮಾರಾಟಗಾರರ ವಿರುದ್ಧ ಟಿಟಿಡಿ ಕಾನೂನು ಕ್ರಮ

ಪಿಟಿಐ
Published 6 ಜೂನ್ 2025, 13:59 IST
Last Updated 6 ಜೂನ್ 2025, 13:59 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ಹೈದರಾಬಾದ್‌: ಭೌಗೋಳಿಕ ಸೂಚಕ ಸ್ಥಾನಮಾನ (ಜಿಐ ಟ್ಯಾಗ್‌) ಪಡೆದಿರುವ ‘ತಿರುಪತಿ ಲಡ್ಡು’ವನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಆನ್‌ಲೈನ್‌ ವಹಿವಾಟು ಸಂಸ್ಥೆಗಳು ಹಾಗೂ ಮಾರಾಟಗಾರರ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಕಾನೂನು ಕ್ರಮ ಜರುಗಿಸಿದೆ.

ಪುಷ್‌ಮೈಕಾರ್ಟ್‌ (ಮಹಿತಾ ಎಲ್‌ಎಲ್‌ಸಿ) ಮತ್ತು ಟ್ರಾನ್ಸಾಕ್ಟ್‌ ಫುಡ್ಸ್‌ ಲಿಮಿಟೆಡ್‌ ಸೇರಿದಂತೆ ಕೆಲ ಆನ್‌ಲೈನ್‌ ಪ್ಲಾಟ್‌ಫಾರ್ಮ್ಸ್‌ ಮತ್ತು ಮಾರಾಟಗಾರರಿಗೆ ನೋಟಿಸ್‌ ಜಾರಿಗೊಳಿಸಿದೆ. ಪುಷ್‌ಮೈಕಾರ್ಡ್‌ ಲೀಗಲ್‌ ನೋಟಿಸ್‌ ಸ್ವೀಕರಿಸಿದ್ದು, ತಮ್ಮ ಉತ್ಪನ್ನಗಳ ಪಟ್ಟಿಯಿಂದ ‘ತಿರುಪತಿ ಲಡ್ಡು’ವನ್ನು ಕೈಬಿಟ್ಟಿದೆ. ಇತರೆ ಮಾರಾಟಗಾರರು ತಮ್ಮ ಪಟ್ಟಿಯಿಂದ ‘ತಿರುಪತಿ ಲಡ್ಡು’ವನ್ನು ತೆಗೆದುಹಾಕಿದ್ದಾರೆ.

‘ತಿರುಪತಿ ಲಡ್ಡು ಕೇವಲ ಉತ್ಪನ್ನವಲ್ಲ; ಅದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯವನ್ನು ಹೊಂದಿರುವ ಪ್ರಸಾದವಾಗಿದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಭಕ್ತರ ನಂಬಿಕೆಯನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್‌ ತಿಳಿಸಿದ್ದಾರೆ.

ADVERTISEMENT

ಭೌಗೋಳಿಕ ಸೂಚಕ ಸ್ಥಾನಮಾನ ಪಡೆದ ಉತ್ಪನ್ನಗಳು (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಅನ್ವಯ ‘ತಿರುಪತಿ ಲಡ್ಡು’ವಿಗೆ ಕಾನೂನಿನ ರಕ್ಷಣೆ ದೊರೆತಿದೆ. ಟಿಟಿಡಿಯ ಮೇಲುಸ್ತುವಾರಿಯಲ್ಲಿ ತಿರುಪತಿ ಲಡ್ಡುವನ್ನು ಜತನದಿಂದ ತಯಾರಿಸಲಾಗುತ್ತದೆ.

‘ತಿರುಪತಿ ಲಡ್ಡು’ವಿನ ಅನಧಿಕೃತ ಬಳಕೆ ಹಾಗೂ ಮಾರಾಟವು ಕಾನೂನು ಉಲ್ಲಂಘನೆಯಾಗಿದ್ದು, ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುತ್ತದೆ. ತಿರುಮಲ ದೇವಸ್ಥಾನದ ಪಾಕಶಾಲೆ ‘ಪೋಟು’ನಲ್ಲಿ ಪೂಜ್ಯನೀಯವಾಗಿ ‘ಲಡ್ಡು’ವನ್ನು ತಯಾರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ಕಾರಣಗಳಿಗಾಗಿ ಗಮನ ಸೆಳೆದಿದೆ.

ತಿರುಪತಿಯ ಪ್ರಧಾನ ದೇವರಾದ ವೆಂಕಟೇಶ್ವರ ಸ್ವಾಮಿಗೆ ಲಡ್ಡು ನೈವೇದ್ಯ ಇಡುವ ಪದ್ಧತಿ 1715ರಲ್ಲಿ ಆರಂಭವಾಯಿತು. ದೇವಾಲಯದ ಪಾಕಶಾಲೆಯು ಪ್ರತಿದಿನ 8 ಲಕ್ಷ ಲಡ್ಡುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 620 ಮಂದಿ ಬಾಣಸಿಗರಿದ್ದು, ಪ್ರತಿದಿನ 3 ಲಕ್ಷದಿಂದ 3.5 ಲಕ್ಷ ಲಡ್ಡುಗಳನ್ನು ತಯಾರಿಸುತ್ತಾರೆ. ದೇವಸ್ಥಾನವು ಲಡ್ಡುಗಳ ಮಾರಾಟದಿಂದ ವಾರ್ಷಿಕ ಸುಮಾರು ₹500 ಕೋಟಿ ವರಮಾನ ಗಳಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.