ಹೈದರಾಬಾದ್: ತಿರುಪತಿಯ ತಿರುಮಲ ದೇವಸ್ಥಾನದ ಪರಕಾಮಣಿಯಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಿರುವ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಂಧ್ರಪ್ರದೇಶ ಹೈಕೋರ್ಟ್ ಸಿಐಡಿಗೆ ನಿರ್ದೇಶನ ನೀಡಿದೆ.
ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಿದ್ದ ಕುರಿತು ಸಿಐಡಿ ತನಿಖೆ ನಡೆಸುವಂತೆ ಕೋರಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸ್ ಠಾಣೆ ಮತ್ತು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಮಂಡಳಿ ಎರಡರಿಂದಲೂ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದೆ. ಮಂಡಳಿಯ ನಿರ್ಧಾರ ಮತ್ತು ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆಯೂ ನ್ಯಾಯಾಲಯ ಆದೇಶಿಸಿದೆ.
2023ರ ಏಪ್ರಿಲ್‌ನಲ್ಲಿ ಪರಕಾಮಣಿಯಲ್ಲಿ ಪೆದ್ದ ಜೀಯಂಗಾರ್ ಸ್ವಾಮಿ ಮಠದ ಸಿಬ್ಬಂದಿ ಸಿ.ವಿ. ರವಿ ಕುಮಾರ್ ₹72 ಸಾವಿರ ಮೌಲ್ಯದ ಅಮೆರಿಕನ್ ಡಾಲರ್‌ಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಟಿಟಿಡಿ ಅಧಿಕಾರಿ ವೈ. ಸತೀಶ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮಂಡಳಿಯು ಆರೋಪಿಯ ಜೊತೆ ಒಪ್ಪಂದ ಮಾಡಿಕೊಂಡು, ಅವರನ್ನು ಲೋಕ ಅದಾಲತ್ ಮೂಲಕ ಪ್ರಕರಣದಿಂದ ಪಾರು ಮಾಡಿತ್ತು ಎಂಬ ಆರೋಪವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.